ಬಂಟ್ವಾಳ, ಸೆ,10 (MSP): ಪೆಟ್ರೋಲ್ _ ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೇಸ್ ಕರೆ ನೀಡಿದ ಬಂದ್ ನ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಸೋಮವಾರ ಬೆಳಿಗ್ಗೆ ಎರಡು ಕೆ.ಎಸ್.ಆರ್.ಟಿ.ಸಿ.ಬಸ್ ಗಳಿಗೆ ಕಲ್ಲೆಸದು , ಅಲ್ಲಲ್ಲಿ ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಾಕಿ ರಸ್ತೆ ತಡೆಗೆ ಪ್ರಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.ಬಿ.ಸಿರೋಡು ಮುಖ್ಯ ವೃತ್ತ ದ ಬಳಿಯಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದ್ದು ಬಸ್ ನ ಎದುರು ಗ್ಲಾಸ್ ಗೆ ಹಾನಿಯಾಗಿದೆ. ಉಳಿದಂತೆ ಮುಂಜಾನೆ ಸುಮಾರು 5.30 ವೇಳೆಗೆ ಬಂಟ್ವಾಳ ದಲ್ಲಿ ಇನ್ನೊಂದು ಬಸ್ ಗೆ ಕಲ್ಲು ತೂರಾಟ ನಡೆದು ಅದರ ಗ್ಲಾಸ್ ಗೂ ಹಾನಿಯಾದ ಘಟನೆ ಸಂಭವಿಸಿದೆ.
ಇನ್ನೂ ಕಲ್ಲಡ್ಕ ಕೆ.ಸಿ.ರೋಡ್, ಮಾಣಿ ನಾರಾಯಣ ಗುರು ಮಂದಿರ ಬಳಿ ಹಾಗೂ ಇನ್ನೂ ಕೆಲವಡೆ ರಸ್ತೆ ಯಲ್ಲಿ ಟಯರ್ ಗೆ ಬೆಂಕಿ ಹಾಕಿದ್ದರು.
ಆದರೆ ಪೊಲೀಸರು ಸಕಾಲಿಕವಾಗಿ ಆಗಮಿಸಿ ಸಂಚಾರಕ್ಕೆ ಅಡಚಣೆಯಾಗದಂತೆ ಟಯರ್ ಗಳನ್ನು ಬದಿಗೆ ಸರಿಸಿದ್ದಾರೆ. ಬಂಟ್ವಾಳ ಎ.ಎಸ್.ಪಿ.ಋಷಿಕೇಷ್ ಸೋನಾವಣೆ, ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಡಿ.ಸಿ.ಐ.ಬಿ.ಇನ್ಸ್ ಪೆಕ್ಟರ್ ಸುನಿಲ್ ನಾಯಕ್, ಬಂಟ್ವಾಳ ನಗರ ಠಾಣಾ ಎಸ್.ಐ. ಚಂದ್ರಶೇಖರ್, ಮಡಿಕೇರಿ ಎಸ್.ಐ.ರಕ್ಷಿತ್ ಗೌಡ, ಮತ್ತಿತರರು ಕಲ್ಲಡ್ಕ ಸಹಿತ ಇತರ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿದರು. ಕಲ್ಲಡ್ಕ ಸಹಿತ ಪ್ರಮುಖ ನಗರಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ.