ಉಡುಪಿ, ಮಾ.28 (DaijiworldNews/PY): ಕರ್ನಾಟಕ ರಾಷ್ಟ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ , ಮಾಜಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಈಗ ಮತ್ತೆ ಕಾಂಗ್ರೆಸ್ನತ್ತ ಹೆಜ್ಜೆ ಹಾಕಲು ಉತ್ಸುಕರಾಗಿದ್ದಾರೆ ಎಂಬ ಸುದ್ದಿ ಉಡುಪಿ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಹಲವು ದಿನಗಳಿಂದ ಕೇಳಿ ಬರುತ್ತಿದೆ.

ಅಮೃತ್ ಶೈಣೈ ಓರ್ವ ಉದ್ಯಮಿಯಾಗಿದ್ದು ಬೇರೆ ಬೇರೆ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಡೆದ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲೂ ಮುಂದೆ ನಿಂತು ಚಟುವಟಿಕೆಯಲ್ಲಿ ತೊಡಗಿದ್ದರು.
ಅಮೃತ್ ಶೈಣೈ ಕಾಂಗ್ರೆಸ್ ಕಟ್ಟಾಳು, ಪಕ್ಷದ ಅನೇಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾವಹಿಸುತ್ತಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನ ಮತ , ಅಸಮಾಧಾನ ಮೂಡಿದಾಗ ನೇರವಾಗಿ ಖಂಡಿಸಿದವರು ಇವರು. ರಾಜ್ಯದ ಹಲವು ಕಾಂಗ್ರೆಸ್ ಮುಖಂಡರೊಂದಿಗೆ ಆತ್ಮೀಯ ಸಂಪರ್ಕ ಹೊಂದಿದ್ದರಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಿಲ್ಲುವ ಆಕಾಂಕ್ಷೆ ಹೊಂದಿದ್ದರು. ಮುಂದೆ ಇದೇ ಕಾರಣದಿಂದ ಉಡುಪಿ ಜಿಲ್ಲಾ ನಾಯಕತ್ವದೊಂದಿಗೆ ಮುನಿಸಿಕೊಂಡು ಪಕ್ಷ ತೊರೆದಿದ್ದರು. ಆದರೂ ಜಿಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕವನ್ನು ಹಾಗೆಯೇ ಉಳಿಸಿಕೊಂಡಿದ್ದರು.
ಇವರ ಸಕ್ರಿಯ ಚಟುವಟಿಕೆಯನ್ನು ಗಮನಿಸಿ, ಎಐಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕ ಮಾಡಿತ್ತು. ಕಾಂಗ್ರೆಸ್ನಿಂದ ಉಚ್ಛಾಟನೆ ಆದ ನಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ, ಅನೇಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ರಾಜ್ಯದ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಇರುವುದರಿಂದ ಅವರೂ ಮಾತೃ ಪಕ್ಷಕ್ಕೆ ಮರಳುವಂತೆ ಆಹ್ವಾನಿಸಿರಬಹುದು ಎಂದು ಅಮೃತ್ ಶೆಣೈ ಆಪ್ತವಲಯ ತಿಳಿಸಿದೆ. ಜಾತ್ಯಾತೀತ ತತ್ವವನ್ನು ಬೆಳೆಸಿಕೊಂಡು ಬಂದ ಅವರಿಗೆ ಬೇರೆ ಪಕ್ಷದ ನೀತಿಗಳು ಒಗ್ಗಿಕೊಂಡಿಲ್ಲ. ಹಾಗಾಗಿ ಮುಂದೆ "ಘರ್ ವಾಪಾಸ್" ಆಗುವ ಮನಸ್ಸು ಮಾಡಿರುವುದು ಖಚಿತ ಮತ್ತು ನಮ್ಮ ಪಕ್ಷ ತೊರೆದರು ನಮ್ಮೊಡನೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದಾರೆ. ಪಕ್ಷಕ್ಕೆ ಸ್ವಾಗತ ಮಾಡಲು ನಾವು ಸಿದ್ಧ ಎಂದು ಅವರ ಆತ್ಮೀಯರೊಬ್ಬರು ದೈಜಿವರ್ಲ್ಡ್ಗೆ ಹೇಳಿಕೊಂಡಿದ್ದಾರೆ.
ಅಮೃತ್ ಶೆಣೈ ಸ್ಪಷ್ಟನೆ: ದೈಜಿವರ್ಲ್ಡ್ ವರದಿಗಾರರೊಂದಿಗೆ ಮಾತನಾಡಿದ ಅಮೃತ್ ಶೆಣೈ, "ಹೌದು ಸದ್ಯದಲ್ಲಿ ಕಾಂಗ್ರೆಸ್ ಮರು ಸೇರ್ಪಡೆಯಾಗುವ ಮನಸ್ಸು ಮಾಡಿದ್ದೇನೆ. ಆ ಸಮಯವನ್ನು ಪತ್ರಿಕಾಗೋಷ್ಠಿ ನಡೆಸಿ ಪತ್ರಿಕೆಯವರಿಗೆ ತಿಳಿಸುತ್ತೇನೆ" ಎಂದರು
ಈಗಾಗಲೇ ಹಲವಾರು ಆಂತರಿಕ ಭಿನ್ನಮತ ಇರುವ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಹಿರಿಯ ನಾಯಕರು ಹೇಗೆ ಇದನ್ನು ಪರಿಗಣಿಸುತ್ತಾರೋ, ಸ್ವಾಗತಕೋರುತ್ತೋ? ಈ ವಿಷಯಕ್ಕೆ ಸಂಬಂಧಿಸಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಏಳಲಿದೆಯೋ ಕಾದುನೋಡಬೇಕು.