ಕಾಸರಗೋಡು, ಮಾ.29 (DaijiworldNews/HR): ಕೇರಳ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರಚಾರಕ್ಕಾಗಿ ರಾಜ್ಯ, ರಾಷ್ಟ್ರ ನಾಯಕರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಸಾಂಧರ್ಭಿಕ ಚಿತ್ರ
ಎಲ್ಡಿಎಫ್ ಪರ ಚುನಾವಣಾ ಪ್ರಚಾರಕ್ಕೆ ಸಿಪಿಎಂ ರಾಷ್ಟ್ರಿಯ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಎಂ.ಎ ಬೇಬಿ ಈಗಾಗಲೇ ಪ್ರಚಾರ ನಡೆಸಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಳೆ ಜಿಲ್ಲೆಗೆ ಆಗಮಿಸಲಿದ್ದು, ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಯುಡಿಎಫ್ ಪರ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಎಐಸಿಸಿ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಕೆ ಕು೦ಞಲಿ ಕುಟ್ಟಿ , ಕರ್ನಾಟಕ ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಇನ್ನಿತರ ಮುಖಂಡರು ಈಗಾಗಲೇ ಪ್ರಚಾರ ನಡೆಸಿದ್ದು, ನಾಳೆ ಕೆ ಪಿ ಸಿ ಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಜಿಲ್ಲೆಗೆ ಆಗಮಿಸಲಿದ್ದಾರೆ.
ಬಿಜೆಪಿ ಪ್ರಮುಖವಾಗಿ ಮಂಜೇಶ್ವರ ಕೇಂದ್ರವಾಗಿ ಪ್ರಚಾರ ತೀವ್ರಗೊಳಿಸಿದ್ದು, ಕರ್ನಾಟಕ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಅಂಗಾರ ಹಾಗೂ ಶಾಸಕರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಸಂಸದ ಗೌತಮ್ ಗಾಂಭೀರ್ , ಅಮಿತ್ ಷಾ ಸೇರಿದಂತೆ ಹಲವು ನಾಯಕರು ಜಿಲ್ಲೆಗೆ ತಲಪಲಿದ್ದಾರೆ.