ಉಳ್ಳಾಲ, ಸೆ10 (MSP):: ಉಳ್ಳಾಲ ವ್ಯಾಪ್ತಿಯಲ್ಲಿ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಮುಖ ಪೇಟೆಗಳಾದ ತೊಕ್ಕೊಟ್ಟು , ಉಳ್ಳಾಲ, ದೇರಳಕಟ್ಟೆ, ಮುಡಿಪು ಜಂಕ್ಷನ್ನಿನಲ್ಲಿ ಅಂಗಡಿ ಮುಂಗಟ್ಟುಗಳನ್ನು ಕೆಲವರು ಸ್ವಯಂ ಪ್ರೇರಿತರಾಗಿ ಬಂದ್ ನಡೆಸಿದ್ದರೆ, ಇನ್ನು ತೆರೆದಿದ್ದ ಅಂಗಡಿಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಬಲವಂತವಾಗಿ ಮುಚ್ಚಿಸಿದ್ದಾರೆ. ಖಾಸಗಿ ಮತ್ತು ಸರಕಾರಿ ಬಸ್ಸುಗಳು ಸಂಚರಿಸದೆ ಪ್ರಯಾಣಿಕರು ಬಹಳ ತೊಂದರೆ ಅನುಭವಿಸಿದರು.
ತಲಪಾಡಿ, ಕೋಟೆಕಾರು, ಕುತ್ತಾರು, ಪಂಡಿತ್ ಹೌಸ್, ಮಾಡೂರು, ಬೋಳಿಯಾರು, ಅಸೈಗೋಳಿ, ಕೊಣಾಜೆ, ಪಾವೂರು, ಹರೇಕಳ ಭಾಗಗಳಲ್ಲಿಯೂ ಕೆಲ ಅಂಗಡಿಗಳನ್ನು ಸ್ವಯಂಪ್ರೇರಿತರಾಗಿ ಹಲವರು ಬಂದ್ ನಡೆಸಿದ್ದರೆ, ಇನ್ನು ಕೆಲವರು ಎಂದಿನಂತೆ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದ್ದಾರೆ. ಬೆಳಿಗ್ಗೆನಿಂದ ಹಾಲು, ಮೀನು, ಪತ್ರಿಕೆ ಹಾಗೂ ಔಷಧಿ ಅಂಗಡಿಗಳು ಎಲ್ಲೆಡೆ ಕಾರ್ಯಾಚರಿಸುತಿತ್ತು. ಬೆಳಗ್ಗಿನಿಂದ ಖಾಸಗಿ ಬಸ್ಸುಗಳು ಮತ್ತು ಸರಕಾರಿ ಬಸ್ಸುಗಳು ಸಂಚರಿಸದೆ ಕೆಲಸಕ್ಕೆ ತೆರಳುವ ಮಂದಿಗೆ ತೊಂದರೆಯಾಯಿತು. ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಬಹಳಷ್ಟು ಪ್ರಯಾಣಿಕರು ಬಸ್ಸಿಗಾಗಿ ಕಾದು, ಬಳಿಕ ರಿಕ್ಷಾ ಖಾಸಗಿ ವಾಹನಗಳಲ್ಲಿ ತೆರಳಿದರು. ರೈಲಿನಿಂದ ದೇರಳಕಟ್ಟೆ ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳನ್ನು ನೋಡಲು ಬರುವವರು ಇಕ್ಕಟ್ಟಿಗೆ ಸಿಲುಕಿದಂತಾಗಿದ್ದರು.
ರಸ್ತೆ ಬದಿಯಲ್ಲೇ ಅಡುಗೆ : ದೇರಳಕಟ್ಟೆ ಜಂಕ್ಷನ್ನಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು. ಗ್ಯಾಸ್ ಸ್ಟವ್ ಬಳಸದೆ ರಸ್ತೆಬದಿಯಲ್ಲಿ ಓಲೆಯಲ್ಲಿ ಅಡುಗೆ ಮಾಡುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು. ಅಲ್ಲಿ ಬೇಯಿಸಿದ ಊಟವನ್ನು ಪ್ರತಿಭಟನೆಯಲ್ಲಿ ಭಾಗವಹಿಸುವ ಮಂದಿಗೆ ವಿತರಿಸಲಾಗುವುದು ಎಂದು ಕಾರ್ಯಕರ್ತರು ತಿಳಿಸಿದರು.
ಪೊಲೀಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ
ಬೆಳಿಗ್ಗೆ ವಾಹನಗಳು ತೆರಳದಂತೆ ಯುವಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರು ನಾಟೆಕಲ್ ಸಮೀಪ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು. ಕಾರಿಗೆ ಬ್ಯಾನರ್ ಕಟ್ಟಿ, ಪಕ್ಷದ ಧ್ವಜವನ್ನು ಹಾಕಿ ರಸ್ತೆ ಮಧ್ಯದಲ್ಲೇ ನಿಲ್ಲಿಸಿರುವುದನ್ನು ಕೊಣಾಜೆ ಪೊಲೀಸರು ವಿರೋಧಿಸಿದ್ದರು. ಅಲ್ಲದೆ ಪೊಲೀಸರು ತೆರವುಗೊಳಿಸುವ ಸಂದರ್ಭ ಪಕ್ಷದ ಧ್ವಜ ನೆಲಕ್ಕೆ ಬಿದ್ದಿತು ಎಂದು ವಿರೋಧಿಸಿ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪೊಲೀಸರು ಏಕವಚನದಲ್ಲಿ ಸಂಬೋಧಿಸಿದ್ದಾರೆ ಎಂದು ಆರೋಪಿಸಿದರು. ಬ್ಲಾಕ್ ಅಧ್ಯಕ್ಷ ಸಂತೋಷ್ ಶೆಟ್ಟಿ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಬ್ಲಾಕ್ ಕಾರ್ಯದರ್ಶಿ ಮುಸ್ತಾಫ ಹರೇಕಳ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್ ಕರೀಂ, ಹಾಗೂ ಪೊಲೀಸ್ ಇಲಾಖೆಯಿಂದ ಸಹಾಯಕ ಪೊಲೀಸ್ ಆಯುಕ್ತ ರಾಮಮೋಹನ್, ಕೊಣಾಜೆ ಠಾಣಾಧಿಕಾರಿ ಅಶೋಕ್ ಉಪಸ್ಥಿತರಿದ್ದರು.
ರಾಜ್ಯ ಸರಕಾರವನ್ನೇ ಬೈಯ್ದ ಮಾಜಿ ಅಧ್ಯಕ್ಷರು !
ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಸರಕಾರವನ್ನು ಬೈಯ್ಯಬೇಕಿದ್ದ ಉಳ್ಳಾಲ ಬ್ಲಾಕ್ನ ಮಾಜಿ ಅಧ್ಯಕ್ಷರಾದ ಈಶ್ವರ್ ಉಳ್ಳಾಲ್ ಮಾತಿನ ಉದ್ದಕ್ಕೂ ರಾಜ್ಯ ಸರಕಾರವನ್ನೇ ಬೈಯ್ಯುತ್ತಾ ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಹಿಂದಿನಿಂದ ಕಾರ್ಯಕರ್ತರು ಒತ್ತಿ ಹೇಳುತ್ತಿದ್ದರೂ ಅದರತ್ತ ಗಮನ ಹರಿಸದೇ ಪದೇ ಪದೇ ರಾಜ್ಯ ಸರಕಾರವನ್ನೇ ಬೈಯ್ಯುತ್ತಿರುವುದು ಕಾರ್ಯಕರ್ತರನ್ನು ಇರುಸುಮುರಿಸುಗೊಳಿಸಿತು.
ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪು ಜಂಕ್ಷನ್ನಿನಲ್ಲಿ ಮಧ್ಯಾಹ್ನ ವೇಳೆ ಪ್ರತಿಭಟನೆ ನಡೆಯಿತು. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ ಬಂದ್ ನ ಮುನ್ನಾ ದಿನ ಎಲ್ಲ ಅಂಗಡಿ ಮಾಲೀಕರಲ್ಲಿ ವಿನಂತಿಸಿದ್ದೆವು. ಅದರಂತೆ ಬೆಂಬಲ ಸೂಚಿಸಿ ಎಲ್ಲರೂ ಬಂದ್ ನಡೆಸಿದ್ದಾರೆ. ದಾಖಲೆಯತ್ತ ಹೋಗಿರುವ ಪೆಟ್ರೋಲ್-ಡಿಸೀಲ್ ಬೆಲೆಯಿಂದಾಗಿ ಜನ ಬಹಳ ತೊಂದರೆಗೊಳಗಾಗಲಿದ್ದಾರೆ. ಕೇಂದ್ರ ಸರಕಾರದ ವೈಫಲ್ಯತೆಯಿಂದ ಜನರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ . ಮುಂದಿನ ದಿನಗಳಲ್ಲಾದರೂ ತೈಲ ಬೆಲೆಯನ್ನು ಕಡಿಮೆಗೊಳಿಸಲು ಪ್ರಧಾನಿ ತೀರ್ಮಾನ ಪಡೆಯಬೇಕು ಎಂದರು. ಪ್ರಶಾಂತ್ ಕಾಜವ, ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮುಖಂಡರುಗಳಾದ ದೇವದಾಸ್ ಭಂಡಾರಿ, ಇರಾ ಗ್ರಾ.ಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ, ನಝೀರ್ ನಡುಪದವು, ಶರೀಫ್ ಪಟ್ಟೋರಿ, ಜಲೀಲ್ ಪಜೀರು, ನಾಸಿರ್ ಮೊಯ್ದೀನ್, ಹೈದರ್ ಕೈರಂಗಳ ಮುಂತಾದವರು ಉಪಸ್ಥಿತರಿದ್ದರು.
ಬಲವಂತದ ಬಂದ್ !
ದೇರಳಕಟ್ಟೆ, ನಿತ್ಯಾನಂದನಗರ, ಕುತ್ತಾರು ಭಾಗಗಳಲ್ಲಿ ಬೆಳಗ್ಗಿನಿಂದ ತೆರೆದಿದ್ದ ಹೊಟೇಲ್ ಮತ್ತು ಅಂಗಡಿಗಳನ್ನು ಕಾಂಗ್ರೆಸ್ ಕಾಋಯಕರ್ತರು ಬಲವಂತವಾಗಿ ಬಂದ್ ನಡೆಸಿದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಪೊಲೀಸರ ಆಗಮನದಿಂದ ಪರಿಸ್ಥಿತಿ ಹತೋಟಿಗೆ ಬಂದಿದೆ. ಸೂಕ್ಷ್ಮ ಪ್ರದೇಶಗಳಾದ ಉಳ್ಳಾಲ, ತಲಪಾಡಿ, ತೊಕ್ಕೊಟ್ಟು ಭಾಗಗಳಲ್ಲಿ ಕೆಎಸ್ ಆರ್ ಪಿ ಬಸ್ಸುಗಳನ್ನು ನಿಯೋಜಿಸಲಾಗಿದ್ದು, ಬಿಗಿ ಬಂದೋಬಸ್ತು ಮುಂದುವರಿದಿದೆ.