ಮಂಗಳೂರು,ಸೆ 10 (MSP) : ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ನೀಡಿದ್ದ ಭಾರತ್ ಬಂದ್ ನಿಂದ ತೊಂದರೆಗೊಳಗಾದ ಜನರಿಗೆ ಆಹಾರ, ಪಾನೀಯದ ವ್ಯವಸ್ಥೆಯನ್ನು ಮಾಡಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮಾನವೀಯತೆಯನ್ನು ಮೆರೆದಿದ್ದಾರೆ. ಬಂದ್ ನಿಂದಾಗಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ಹಾಗೂ ಹೊಟೇಲ್ ಗಳು ಮುಚ್ಚಿದ್ದ ಕಾರಣ ಜನರು ಪರದಾಡುವಂತಾಯಿತು. ಹೀಗಾಗಿ ಮಂಗಳೂರು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ಹಂಪನಕಟ್ಟೆಯಲ್ಲಿರುವ ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳ ಸಹಿತ ವಿವಿಧೆಡೆಯಲ್ಲಿ ಬಂದ್ ನಿಂದ ತೊಂದರೆಗೊಳಗಾದ ಸುಮಾರು ಒಂದೂವರೆ ಸಾವಿರ ಜನರಿಗಾಗುವಷ್ಟು ಪಲಾವ್ ಮತ್ತು ನೀರಿನ ಬಾಟಲುಗಳನ್ನು ಶಾಸಕ ಡಿ ವೇದವ್ಯಾಸ ಕಾಮತ್ ಮತ್ತು ಅವರ ತಂಡ ಹಂಚಿದರು.
ಬಳಿಕ ಮಾತನಾಡಿದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ಇಡೀ ಜಿಲ್ಲಾಡಳಿತವನ್ನು ದುರುಪಯೋಗಪಡಿಸಿಕೊಂಡು ಬಂದ್ ಮಾಡಿದೆ. ಹಲವು ಕಡೆ ಅಂಗದಿ ಮುಂಗಟ್ಟುಗಳನ್ನು , ಹೋಟೇಲುಗಳನ್ನು ಬಲವಂತವಾಗಿ ಕಾಂಗ್ರೆಸ್ಸಿಗರು ಬಂದ್ ಮಾಡಿದ್ದಾರೆ. ಹೋಟೇಲುಗಳಿಗೆ ಕಲ್ಲು ಬಿಸಾಕಿ ಹಾನಿ ಮಾಡಿದ್ದಾರೆ. ಬಂದ್ ನಿಂದ ಜನರಿಗೆ ತೊಂದರೆಯಾಗಿದೆ. ಹೀಗಾಗಿ ಬಂದ್ ನಿಂದ ತೊಂದರೆಗೊಳಗಾದ ಜನರಿಗೆ ಆಹಾರ ಮತ್ತು ಶುದ್ಧ ನೀರನ್ನು ಒದಗಿಸುವುದು ಶಾಸಕನಾಗಿ ನನ್ನ ಕರ್ತವ್ಯ. ಹಾಗಾಗಿ ಜನರಿಗೆ ಸಹಾಯವಾಗುವ ದೃಷ್ಟಿಯಲ್ಲಿ ಆಹಾರ ಮತ್ತು ನೀರನ್ನು ಒದಗಿಸಲಾಗಿದೆ. ಇದರಿಂದ ಒಂದೂವರೆ ಸಾವಿರಷ್ಟು ಜನರಿಗೆ ಉಪಯೋಗವಾಗಿದೆ. ಕಾಂಗ್ರೆಸ್ಸಿಗರು ಸಾರ್ವಜನಿಕರಿಕೆ ತೊಂದರೆ ಮಾಡದೇ ಪ್ರತಿಭಟನೆ ನಡೆಸಬೇಕಿತ್ತು. ಕಾಂಗ್ರೆಸ್ಸಿಗರ ಬಲವಂತದ ಬಂದ್ ನಿಂದ ಜನರಿಗೆ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರ ಬೆಂಬಲದಿಂದ ಆಹಾರ, ಪಾನೀಯ ವಿತರಿಸಲಾಗಿದೆ ಎಂದರು.
ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ದಿವಾಕರ, ವಸಂತ ಜೆ ಪೂಜಾರಿ, ರಾಜೇಶ ಶೆಟ್ಟಿ, ಜಗದೀಶ ಶೆಟ್ಟಿ, ಮಲ್ಲೇಶ, ಮುರಳಿಧರ್ ನಾಯಕ್, ಪಮ್ಮಿ ಕೊಡಿಯಾಲ್ ಬೈಲ್, ಲಲ್ಲೇಶ್ ಕುಮಾರ್, ವಿಜಯ ಬೆನೆಡಿಕ್ಟ್, ರಮೇಶ ಹೆಗ್ಡೆ, ಶರತ್ ಪದವಿನಂಗಡಿ, ಪ್ರಶಾಂತ್ ಸಹಿತ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.