ಶಿರೂರು, ಮಾ.31 (DaijiworldNews/PY): ಶಿರೂರು ಗ್ರಾಮದ ಬಪ್ಪನಬೈಲು ಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟೋಲ್ ಚಲೋ ಸಾಂಕೇತಿಕ ಪ್ರತಿಭಟನೆ ಶಿರೂರು ಟೋಲ್ಗೇಟ್ ಬಳಿ ನಡೆಯಿತು.














ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ರಘುರಾಮ ಕೆ.ಪೂಜಾರಿ, "ಈಗಾಗಲೇ ಕೃಷಿ ಕುಟುಂಬ ಅಧಿಕ ಸಂಖ್ಯೆಯಲ್ಲಿರುವ ಬಪ್ಪನಬೈಲು ಭಾಗದಲ್ಲಿ ರಸ್ತೆ ಕಾಮಗಾರಿ ಆರಂಭದಲ್ಲಿ ನೀಡಿದ್ದ ಬಹುತೇಕ ಬೇಡಿಕೆಗಳು ಈಡೇರಿಲ್ಲ. ಇದರಿಂದಾಗಿ ಪ್ರತಿವರ್ಷ ಇಲ್ಲಿನ ರೈತರು ಸಂಕಷ್ಟ ಪಡುವಂತಾಗಿದೆ. ಮಾತ್ರವಲ್ಲದೆ ಸಂಪರ್ಕ ರಸ್ತೆಗಳು ಕೂಡ ಇಲ್ಲವಾಗಿದೆ. ಹೀಗಾಗಿ ಶೀಘ್ರ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಬೇಕು" ಎಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಸಂಬಂಧಪಟ್ಟ ಕಾಮಗಾರಿ ನಡೆಸುವ ಕಂಪೆನಿ ಅಧಿಕಾರಿಗಳು ತಕ್ಷಣದಿಂದ ಸ್ಥಳೀಯರ ಅಗತ್ಯ ಸಮಸ್ಯೆ ಕಾಮಗಾರಿ ಆರಂಭಿಸಲು ತಿಳಿಸಿದ್ದು, ಮತ್ತು ಕೃಷಿಕರಿಗೆ ಅನುಕೂಲ ಮಾಡಿಕೊಡುವಂತೆ ಹಾಗೂ ಇಲಾಖಾ ವ್ಯಾಪ್ತಿಯಲ್ಲಿ ಸಾಧ್ಯವಿರುವ ಕೆಲಸಗಳನ್ನು ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿ, ಬೈಂದೂರು ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಶಿರೂರು ಗ್ರಾ.ಪಂ ಅಧ್ಯಕ್ಷೆ ಜಿ.ಯು ದಿಲ್ಶಾದ್ ಬೇಗಂ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್, ಸ್ಥಳೀಯರಾದ ಸುಬ್ರಾಯ ನಾಯ್ಕ ಹಾಜರಿದ್ದರು.
ಬಳಿಕ ಐ.ಆರ್.ಬಿ ಅಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಲಾಯಿತು. ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.