ಮಂಗಳೂರು, ಸೆ 10(SM): ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಭಾರತ ಬಂದ್ಗೆ ಕರೆ ಕೊಟ್ಟಿದ್ದ ವೇಳೆ ನಗರದ ವಿವಿದೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆಗಳು ನಡೆದಿವೆ. ಆ ಮೂಲಕ ಜನಸಾಮಾನ್ಯರಿಗೆ ಅನಗತ್ಯ ತೊಂದರೆ ನೀಡಿದ್ದಾರೆ. ಜನರಿಗೆ ಸಮಸ್ಯೆಯನ್ನುಂಟು ಮಾಡಿದ ಎಷ್ಟು ಮಂದಿಯನ್ನು ಪೊಲೀಸ್ ಇಲಾಖೆ ಬಂಧಿಸಿದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪ್ರಶ್ನಿಸಿದ್ದು, ಈ ಬಗ್ಗೆ ಇಲಾಖೆ ಮಾಹಿತಿ ನೀಡಬೇಕು ಎಂದಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ. ಕೆಲ ಅಂಗಡಿಗಳ ಮಾಲಕರಿಗೆ ಬೆದರಿಕೆ ಹಾಕಿ ಬಾಗಿಲು ಮುಚ್ಚಿಸಲಾಗಿದೆ. ಬಲವಂತದ ಬಂದ್ ಬಗ್ಗೆ ಹಲವಾರು ಮಂದಿ ತಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದ ಜ್ಯೋತಿ ವೃತ್ತದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಿಕ್ಷಾವೊಂದರಲ್ಲಿ ಮಹಿಳೆ ಕೆಎಂಸಿ ಆಸ್ಪತ್ರೆಗೆ ತೆರಳುತ್ತಿದ್ದರು. ಆಕೆಯನ್ನು ಕೈಹಿಡಿದು ತಡೆದು ಪ್ರತಿಭಟನಾಕಾರರು ದಬ್ಬಾಳಿಕೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳು ಈ ಬಗ್ಗೆ ತನಗೆ ಮಾಹಿತಿ ನೀಡಿದರು. ತಕ್ಷಣವೇ ತಾನು ಸ್ಥಳಕ್ಕೆ ತೆರಳಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದ್ದೇನೆ ಎಂದರು.
ಜ್ಯೋತಿ ವೃತ್ತವನ್ನು ಒಂದು ಗಂಟೆಗೂ ಹೆಚ್ಚು ಸಮಯ ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ ಈ ವೇಳೆ ಪ್ರತಿಭಟನಾಕಾರರನ್ನು ಬಂಧಿಸದಿರುವುದು ಖಂಡನೀಯ ಎಂದಿದ್ದಾರೆ.