ಉಳ್ಳಾಲ, ಎ 1 (DaijiworldNews/SM): ಸ್ಕೂಟರ್ ಮತ್ತು ಬೈಕ್ ಮುಖಾಮುಖಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ಚಿಂತಾಜನಕ ಸ್ಥಿತಿಯಲ್ಲುದ್ದ ಇಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಿನ್ಯ ನಿವಾಸಿ ರಾಮಣ್ಣ (50), ಮಾಡೂರು ನಿವಾಸಿ ಸತೀಶ್ (34) ಮೃತಪಟ್ಟವರಾಗಿದ್ದಾರೆ.

ಸ್ಕೂಟರಿನಲ್ಲಿದ್ದ ಕಿನ್ಯ ನಿವಾಸಿ ರಾಮಣ್ಣ (50) ಮತ್ತು ಮಾಡೂರು ನಿವಾಸಿ ಸತೀಶ್ (34) ಸಾವನ್ನಪ್ಪಿದವರು. ಮಾಡೂರು ನಿವಾಸಿಗಳಾಗಿರುವ ಬೆನ್ಸನ್ ಮತ್ತು ನರೇಂದ್ರ ಎಂಬವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ. 27 ರಂದು ರಾತ್ರಿ 10 ಗಂಟೆಗೆ ಕೊಂಡಾಣ ಕಟ್ಟೆ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ರಾಮಣ್ಣ ಮತ್ತು ಸತೀಶ್ ಎಂಬವರಿದ್ದ ಸ್ಕೂಟರಿಗೆ , ಎದುರಿನಿಂದ ಬಂದ ಬೆನ್ಸನ್, ನರೇಂದ್ರ ಅವರಿದ್ದ ಬೈಕ್ ಮುಖಾಮುಖಿಯಾಗಿ ಗುದ್ದಿತ್ತು.
ಗಾಯಗೊಂಡಿದ್ದ ನಾಲ್ವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾಮಣ್ಣ ಅವರು ಮಾ. 28 ರಂದೇ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಸತೀಶ್ ಅವರು ಮಾ. 30 ರಂದು ಸಾವನ್ನಪ್ಪಿದ್ದಾರೆ . ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ರಾಮಣ್ಣ ಅವರು ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಸತೀಶ್ ಅವಿವಾಹಿತರಾಗಿದ್ದರು. ನಾಗುರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.