ಕಾಸರಗೋಡು, ಎ 1 (DaijiworldNews/SM): ಕೇರಳ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದ್ದು, ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳು ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿವೆ. ಈ ಪೈಕಿ ಮಂಜೇಶ್ವರ ಹಾಗೂ ಉದುಮ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿದೆ.

ಮಂಜೇಶ್ವರದಲ್ಲಿ ಆರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಮತ್ತು ಬಿ ಜೆಪಿ ನಡುವಿನ ನೇರ ಹೋರಾಟದ ಜೊತೆಗೆ ಸಿಪಿಐಎಂ ನೇತೃತ್ವದ ಎಲ್ ಡಿ ಎಫ್ ಪ್ರಬಲ ಸ್ಪರ್ಧೆಯೊಡ್ಡುತ್ತಿದೆ. ಮೂರು ಪಕ್ಷಗಳ ಸೆಣಸಾಟದಲ್ಲಿ ಮಂಜೇಶ್ವರ ಗಮನ ಸೆಳೆಯುತ್ತಿದೆ. 1987 ರ ರಾಜಕೀಯ ಹೋರಾಟ ದಿಂದ ಹಿಡಿದು 2019 ರ ಲ್ಲಿ ನಡೆದ ಉಪಚುನಾವಣೆ ತನಕ ಒಂದು ಬಾರಿ ಹೊರತು ಪಡಿಸಿ ಉಳಿದ ಎಲ್ಲಾ ಚುನಾವಣೆಯಲ್ಲಿ ಯು ಡಿ ಎಫ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದೆ. 2006 ರಲ್ಲಿ ಎಲ್ ಡಿ ಎಫ್ ಅನಿರೀಕ್ಷಿತವಾಗಿ ಈ ಕ್ಷೇತ್ರವನ್ನು ಗೆದ್ದಿತ್ತು.
ಬಳಿಕದ ಮೂರು ಚುನಾವಣೆಯಲ್ಲಿ ಯು ಡಿ ಎಫ್ ತನ್ನ ಭದ್ರಕೋಟೆಯನ್ನು ಉಳಿಸಿಕೊಂಡಿದೆ. ಬಿಜೆಪಿ ಈ ಎಲ್ಲಾ ಚುನಾವಣೆಯಲ್ಲೂ ಎರಡನೇ ಸ್ಥಾನದಲ್ಲೇ ತೃಪ್ತಿ ಪಡೆದುಕೊಂಡಿದೆ. ಈ ಪೈಕಿ 2016ರ ಚುನಾವಣೆಯಲ್ಲಿ ಯುಡಿಎಫ್ ಮತ್ತು ಬಿಜೆಪಿಗೆ ಮರೆಯಲಾಗದ ಫಲಿತಾಂಶವಾಗಿತ್ತು. ಯುಡಿಎಫ್ ನಿಂದ ಸ್ಪರ್ಧಿಸಿದ್ದ ಪಿ.ಬಿ. ಅಬ್ದುಲ್ ರಜಾಕ್ ಬಿಜೆಪಿಯ ಕೆ. ಸುರೇಂದ್ರನ್ ವಿರುದ್ಧ 89 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ನಡುವೆ ಪಿ . ಬಿ ಅಬ್ದುಲ್ ರಜಾಕ್ ರವರ ನಿಧನದ ಹಿನ್ನಲೆಯಲ್ಲಿ 2019 ರಲ್ಲಿ ನಡೆದ ಉಪಚುನಾವಣೆಯಲ್ಲಿ ಯು ಡಿ ಎಫ್ 8 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಯು ಡಿ ಎಫ್ ನ ಎಂ . ಸಿ ಕಮರುದ್ದೀನ್ ರವರು ಬಿಜೆಪಿಯ ಕುಂಟಾರು ರವೀಶ ತಂತ್ರಿ ರವರನ್ನು ಸೋಲಿಸಿದ್ದರು.
ಈ ಬಾರಿ ಯು ಡಿ ಎಫ್ ನಿಂದ ಎ . ಕೆ ಎಂ ಅಶ್ರಫ್ , ಬಿಜೆಪಿಯಿಂದ ರಾಜ್ಯಾಧ್ಯಕ್ಷ ಕೆ . ಸುರೇಂದ್ರನ್ ಹಾಗೂ ಎಲ್ ಡಿ ಎಫ್ ನಿಂದ ವಿ . ವಿ ರಮೇಶನ್ ಕಣದಲ್ಲಿದ್ದಾರೆ . ಪ್ರವೀಣ್ ಕುಮಾರ್ ( ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ) , ಜೋನ್ ಡಿ ಸೋಜ ( ಪಕ್ಷೇತರ ) , ಸುರೇಂದ್ರನ್ ಎಂ (ಪಕ್ಷೇತರ) ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಅಶ್ರಫ್ ಸ್ಥಳೀಯವರಾಗಿದ್ದು , ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಸೇವೆ ಸಲ್ಲಿಸಿದ್ದಾರೆ . ಸುರೇಂದ್ರನ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು, ಈ ಹಿಂದೆಯೂ ಮಂಜೇಶ್ವರದಿಂದ ಸ್ಪರ್ಧಿಸುತ್ತಿದ್ದಾರೆ.