ಮಂಗಳೂರು, ಅ 5: ಕೇರಳದಲ್ಲಿ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬುಧವಾರ ರಾತ್ರಿ ಮಂಗಳೂರಿಗೆ ಆಗಮಿಸಿ ವಾಸ್ತವ್ಯ ಹೂಡಿದರು. ಇವರನ್ನು ಕದ್ರಿಯ ಜೋಗಿ ಮಠ ಪೀಠಾಧಿಪತಿ ರಾಜ ನಿರ್ಮಲನಾಥ ಸ್ವಾಮೀಜಿ ಬರಮಾಡಿಕೊಂಡರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಮೇಲೆ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಸಿಎಂ ಯೋಗಿ , ಮಠದಲ್ಲಿ ಶ್ರೀ ಕಾಳಭೈರವ ದೇವರ ದರ್ಶನ ಪಡೆದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭ ಮಾತನಾಡಿದ ಅವರು, ಧರ್ಮ ಮತ್ತು ರಾಜನೀತಿ ಸಮ್ಮಿಲನಗೊಂಡರೆ ಸುಭಿಕ್ಷೆ ನೆಲೆಸುತ್ತದೆ. ಧರ್ಮದ ಜತೆಗೆ ರಾಷ್ಟ್ರ ಧರ್ಮದ ರಕ್ಷಣೆ ನಮ್ಮ ಜೀವನದ ಧ್ಯೇಯವಾಗಬೇಕು ಎಂದವರು ತಿಳಿಸಿದರು. ಇನ್ನು ಈ ಸಂದರ್ಭ ಮಠದ ನಿಕಟಪೂರ್ವ ಪೀಠಾಧಿಪತಿ ರಾಜ ಸಂದ್ಯನಾಥ ಸ್ವಾಮೀಜಿ, ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರಿದ್ದರು.ಯೋಗಿ ಆದಿತ್ಯನಾಥ್ ವಾಸ್ತವ್ಯ ಹೂಡಿದ್ದ ಹಿನ್ನಲೆಯಲ್ಲಿ ಮಠದ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.