ವಿಜಯಪುರ, ಸೆ 11 (MSP): ಮಕ್ಕಳಿರುವ ಮನೆಯಲ್ಲಿ ಮೈ ಎಲ್ಲಾ ಕಣ್ಣಾಗಿರಬೇಕು ಅನ್ನುವ ಮಾತು ನಿಜ. ಹೌದು ಇಂಥದ್ದೇ ಮನಕಲಕುವ ಘಟನೆಯೊಂದು ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ನಡೆದಿದೆ. ಸುಣ್ಣದ ಡಬ್ಬಿಯನ್ನು ನುಂಗಿ ಒಂಭತ್ತು ತಿಂಗಳ ಮಗು ದಾರುಣವಾಗಿ ಮೃತಪಟ್ಟಿದೆ. ಇಲ್ಲಿನ ನಿವಾಸಿಯಾದ ವಿಶ್ವನಾಥ ತಾಳಿಕೋಟಿ ಎಂಬುವವರ ಪುತ್ರ ಮಲ್ಲು ಮೃತ ಹಸುಳೆ . ಸೆ 10 ರ ಸೋಮವಾರದಂದು ಮನೆ ತುಂಬಾ ಆಟವಾಡಿಕೊಂಡಿದ್ದ ಮಗು ಆಕಸ್ಮಿಕವಾಗಿ ಸುಣ್ಣದ ಡಬ್ಬಿ ನುಂಗಿದೆ. ಸುಣ್ಣದ ಡಬ್ಬಿ ನಿಂಗಿದ ತಕ್ಷಣ ಕಂದ ಒದ್ದಾಡಲು ಪ್ರಾರಂಭಿಸಿದೆ. ಇದರಿಂದ ಗಾಬರಿಯಾದ ಪೋಷಕರು, ಮಗುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರು ತಡಮಾಡದೇ ಚಿಕಿತ್ಸೆ ನೀಡಿ ಸುಣ್ಣದ ಡಬ್ಬಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ಆದರೆ ಯಮ ಸ್ವರೂಪಿಯಾಗಿದ್ದ ಸುಣ್ಣ ಮುದ್ದು ಕಂದನ ಹೊಟ್ಟೆಯಲ್ಲೇ ಕರಗಿ ದೇಹ ಸೇರಿಕೊಂಡು ಪರಿಣಾಮ ಬೀರಲಾರಂಭಿಸಿತ್ತು. ಬಳಿಕ ಯಾವುದೇ ಚಿಕಿತ್ಸೆಗೆ ಸ್ಪಂದಿಸದೆ ಮಗು ಕೊನೆಯುಸಿರೆಳೆದಿದೆ.