ಉಡುಪಿ, ಸೆ.11 (MSP): ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ಕೊಟ್ಟಿರುವ ಸೆ.10 ರ ಭಾರತ್ ಬಂದ್ ವೇಳೆ ಉಡುಪಿಯ ಶ್ರೀನಾರಾಯಣಗುರು ಸಭಾಭವನದ ಸಮೀಪ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೈಕೈ ಮಿಲಾಯಿಸಿದ ಸಂದರ್ಭ ಪೊಲೀಸರು ವಿನಂತಿಗೂ ಮಣಿಯದೆ ಪೊಲೀಸರಿಗೆ ನಿಂದಿಸಿ ನೂಕು ನುಗ್ಗಲು ನಡೆಸಿದ ಕಾರಣ ಲಾಠಿ ಚಾರ್ಜ್ ನಡೆಸಿ ಎರಡು ಗುಂಪುಗಳನ್ನು ಪೊಲೀಸರು ಚದುರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲೆಯಾದ್ಯಂತ ಜನಸಮಾನ್ಯರು ಅಂಗಡಿ ಮಾಲಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಸ್ಪಂದನೆ ವ್ಯಕ್ತ ಪಡಿಸಿದ್ದರು. ನಮ್ಮ ಕಾರ್ಯಕರ್ತರು ಮನವಿ ಮಾಡಿದ್ದಾರಷ್ಟೆ, ಎಲ್ಲಿಯೂ ಒತ್ತಾಯಪೂರ್ವಕ ಬಂದ್ ಮಾಡಿಲ್ಲ.
ಇಡೀ ದೇಶಾದ್ಯಂತ ಅದೆಷ್ಟು ಬಾರಿ ಭಾರತ್ ಬಂದ್ ಹಿಂಸಾಚರದೆಡೆ ತಿರುಗಿಲ್ಲ. ಆದರೆ ಉಡುಪಿಯಲ್ಲಿ ಟಯರ್ ಗೇ ಬೆಂಕಿ ಹಚ್ಚುವ , ಅಥವಾ ಕಲ್ಲು ತೂರಾಟದಂತಹ ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಕೂಡ ಲಾಠಿ ಚಾರ್ಜ್ ಮಾಡಲಾಗಿದೆ. ಎಲ್ಲವೂ ಶಾಂತಿಯುತವಾಗಿ ಬಂದ್ ನಡೆದಿತ್ತು. ಬಿಜೆಪಿ ಕಾರ್ಯಕರ್ತರೇ ತಮ್ಮ ದ್ವಜ ಹಿಡಿದು ಕಾಂಗ್ರೆಸ್ ವಿರುದ್ದ ಘೋಷಣೆ ಕೂಗಿದ್ದು , ಆ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತು. ಅಶಾಂತಿ ಸೃಷ್ಟಿಸಲು ಬಿಜೆಪಿಗರೇ ಮೂಲ ಕಾರಣ.
ಪೊಲೀಸ್ ಲಾಠಿ ಚಾರ್ಜ್ ನಿಂದ ಹಲವರಿಗೆ ಗಾಯಗಳಾಗಿದೆ. ಇನ್ನು ಕೆಲವರ ಕೈ ಮೂಳೆ ಮುರಿದಿದೆ. ಅನವಶ್ಯಕವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ಉಸ್ತುವಾರಿ ಮಂತ್ರಿಯವರ ಗಮನಕ್ಕೂ ತರಲಾಗಿದೆ. ಅಗತ್ಯ ಬಿದ್ದಲ್ಲಿ ಪೊಲೀಸ್ ನಡವಳಿಕೆ ಹಾಗೂ ಬಿಜೆಪಿಯ ವಿರುದ್ದ ಎಸ್ಪಿ ಕಛೇರಿ ಎದುರು ಧರಣಿ ಕೂರುತ್ತೇವೆ. ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆ ಆಗಬೇಕು. ಇದರ ಹಿಂದಿನ ಉದ್ದೇಶವೇನು ಎಂಬುವುದು ಬಹಿರಂಗವಾಗಬೇಕು. ಘಟನೆ ಸಂದರ್ಭ ಖುದ್ದು ಎಸ್ಪಿ ಲಾಠಿ ಪ್ರಹಾರ ಮಾಡಿದ್ದರ ಬಗ್ಗೆ ತನಿಖೆ ಆಗಬೇಕು ಎಂದು ಸೊರಕೆ ಒತ್ತಾಯಿಸಿದರು.