ಬೆಂಗಳೂರು, ಸೆ.11 (MSP): ದೋಸ್ತಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ ಜಾರಕಿಹೊಳಿ ಬ್ರದರ್ಸ್ ನಡೆಯಿಂದ ಸರ್ಕಾರಕ್ಕೆ ಅಪಾಯವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಹೀಗಾಗಿ ಕಾಂಗ್ರೆಸ್ ಹೈಕಮಾಂಡ್, ಡಾ. ಜಿ ಪರಮೆಶ್ವರ್ ಅವರ ಫಾರಿನ್ ಟೂರ್ ಗೆ ಬ್ರೇಕ್ ಹಾಕಿದೆ.
ಕಾಂಗ್ರೆಸ್ ನ ವರಿಷ್ಠರ ನಡೆಯಿಂದ ಮುನಿಸಿಕೊಂಡಿರುವ ಜಾರಕಿಹೊಳಿ ಬ್ರದರ್ಸ್ ಸಹೋದರರು, ಹೊಸ ರಾಜಕೀಯ ಸಮೀಕರಣದ ಸುಳಿವು ನೀಡುತ್ತಿದ್ದಾರೆ. ಇದೇ ಹಿನ್ನಲೆಯಲ್ಲಿ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಇದು ಕಾಂಗ್ರೆಸ್ ಹೈಕಮಾಂಡ್ ಗೂ ಒಗಟಾಗಿ ಪರಿಣಮಿಸಿದೆ. ಇದರಿಂದ ಎಚ್ಚರಿಕೆ ನಡೆ ಇರಿಸಿರುವ ಕಾಂಗ್ರೆಸ್ ಹೈಕಮಾಂಡ್ ಪರಂಗೆ ವಿದೇಶ ಪ್ರವಾಸದ ಅಗತ್ಯವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಸರಕಾರ ಉಳಿಸಿಕೊಳ್ಳುವುದು ಮುಖ್ಯ. ಹೀಗಾಗಿ ಬೆಂಗಳೂರಿನಲ್ಲೇ ಇದ್ದು ಶಾಸಕರ ಚಲನವಲನದ ಬಗ್ಗೆ ಹದ್ದಿನ ಕಣ್ಣಿಡಿ ಎಂದು ಸೂಚಿಸಿದ್ದಾರೆ. ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಬರುವರೆಗೆ ಎಚ್ಚರಕೆಯಿಂದಿರಿ, ಅವರು ಈ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ ಎಂದು ಕಿವಿಮಾತು ಹೇಳಿದೆ.
ಈ ನಡುವೆ ದೋಸ್ತಿ ಸರ್ಕಾರದ ಅಪೋಶನಕ್ಕೆ ಹೊರಟವರಂತೆ ಬಂಡಾಯ ಎದ್ದಿರುವ ಜಾರಕಿಹೊಳಿ ಬ್ರದರ್ಸ್ ವರ್ತಿಸುತ್ತಿದ್ದಾರೆ. ಹಾಗಾಗಿ ಅವರನ್ನು ಸಮಾಧಾನಪಡಿಸಬೇಕು, ಸಿದ್ದು ಬರೋ ತನಕ ಕಾಯುತ್ತಾ ಕುಳಿತರೆ ಜಾರಕಿಹೊಳಿ ಕುಟುಂಬದವರು ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅತೃಪ್ತರನ್ನು ಎಚ್ಚರಿಕೆಯಿಂದ ನಿಭಾಯಿಸಿ, ಪರಿಸ್ಥಿತಿ ಕೈಮೀರುವ ಸಾಧ್ಯತೆ ಇರೋದ್ರಿಂದ ಪ್ರಮುಖ ನಾಯಕರ್ಯಾರು ವಿದೇಶಕ್ಕೆ ಹೋಗಬಾರದು ಎಂಬ ಸೂಚನೆ ನೀಡಿದ್ದಾರೆ.