ಮಂಗಳೂರು, ಏ.03 (DaijiworldNews/HR): ಶೂ ಮತ್ತು ಶರ್ಟ್ ಬಟನ್ನಲ್ಲಿ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಕಾಸರಗೋಡು ಮೂಲದ ಅಬ್ದುಲ್ ಸಲಾಮ್ ಮಣಿಪಾರಂಬು ಮತ್ತು ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ.
ಅಬ್ದುಲ್ ಸಲಾಮ್ ಅವರು ಶಾರ್ಜಾದಿಂದ ಬರುತ್ತಿದ್ದ ಇಂಡಿಗೋ ವಿಮಾನ, ಹಾಗೂ ಅಶ್ರಫ್ ಅವರು ದುಬೈನಿಂದ ಬರುವ ಏರ್ ಇಂಡಿಯಾ ವಿಮಾನದಿಂದ ಬಂದಿಳಿದಿದ್ದು, ಜೀನ್ಸ್ ಅಂಗಿ ಗುಂಡಿ ಚಿನ್ನವನ್ನು ಮರೆಮಾಚುವ ಮೂಲಕ ಮತ್ತು ಶೂಗಳಲ್ಲಿ ಚಿನ್ನದ ಸರಪಣಿಗಳನ್ನು ಇಟ್ಟುಕೊಂಡು ಕಳ್ಳಸಾಗಣೆ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತರಿಂದ 26,43,840 ರೂ.ಗಳ ಮೌಲ್ಯದ, 576 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಕಾರ್ಯಾಚರಣೆಯ ನೇತೃತ್ವವನ್ನು ಪ್ರವೀಣ್ ಕಂಡಿ, ರಾಕೇಶ್, ಸಿ.ಎಂ. ಮೀನಾ ಮತ್ತು ಆಶಿಶ್ ವರ್ಮಾ ವಹಿಸಿದ್ದರು.