ಸೆ.11 (MSP): ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇನ್ನು ಕೆಲವೇ ಸಮಯದಲ್ಲಿ ಇಳಿಯುತ್ತೆ. ಭಾರತವೂ ಸುಮಾರು 8 ಲಕ್ಷ ಕೋಟಿ ರೂ. ಮೌಲ್ಯದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇವಿಷ್ಟೇ ಅಲ್ಲದೆ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಭಾರತ ತೈಲ ವಿಚಾರದಲ್ಲಿ ಪರಾವಲಂಬನೆಯನ್ನು ಬಿಟ್ಟರೆ ಪೆಟ್ರೋಲ್, ಡಿಸೇಲ್ ಬೆಲೆ ಕುಸಿತವಾಗುತ್ತದೆ. ಇದಕ್ಕಾಗಿ ದೇಶದಲ್ಲಿ ಒಟ್ಟಾರೆ 5 ಎಥೆನಾಲ್ ಉತ್ಪಾದನಾ ಘಟಕಗಳನ್ನು ಕೇಂದ್ರ ಸರ್ಕಾರ ತೆರೆಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಛತ್ತೀಸ್ಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಥೆನಾಲ್ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿದರೆ ದೇಶದಲ್ಲಿ ತೈಲ ಬೆಲೆ ಇಳಿಕೆಯಾಗಲಿದೆ. ಎಥೆನಾಲ್ ಘಟಕಗಳು ಭಾರತದಲ್ಲಿ ಪ್ರಾರಂಭಗೊಂಡ ಬಳಿಕ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 55 ರೂ., ಡೀಸೆಲ್ 50 ರೂ. ಆಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪಟ್ಟಣ ಹಾಗೂ ಮಹಾನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಈ ಘಟಕದಲ್ಲಿ ಇಂಧನವನ್ನು ಉತ್ಪತ್ತಿ ಮಾಡಲಾಗುತ್ತದೆ. ಇದಲ್ಲದೆ ಭತ್ತ, ಗೋಧಿಯ ಹುಲ್ಲು, ಕಬ್ಬಿನ ತ್ಯಾಜ್ಯ ಹಾಗೂ ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಬಹುದಾಗಿದೆ ಎಂದು ತಿಳಿಸಿದರು. ಅದಿವಾಸಿಗಳ ಹಾಗೂ ರೈತರ ಸಹಕಾರದಿಂದ ಎಥೆನಾಲ್, ಮೆಥೆನಾಲ್, ಬಯೋ- ಇಂಧನವನ್ನು ತಯಾರಿಸಬಹುದಾಗಿದ್ದು, ಇವುಗಳನ್ನು ವಿಮಾನ ಹಾರಾಟಕ್ಕೂ ಬಳಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಕೆಲವು ದಿನಗಳ ಹಿಂದೆಯಷ್ಟೇ ಜೈವಿಕ ಇಂಧನ ಬಳಸಿದ್ದ ಸ್ಪೈಸ್ ಜೆಟ್ ವಿಮಾನ ಡೆಹ್ರಾಡೂನ್ನಿಂದ ಹೊರಟು ದೆಹಲಿಗೆ ಬಂದಿಳಿದು, ಯಶಸ್ವಿ ಹಾರಾಟ ನಡೆಸಿತ್ತು. ಪ್ರಸ್ತುತ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ವಿಮಾನಗಳು ಜೈವಿಕ ಇಂಧನವನ್ನು ಬಳಸುತ್ತಿವೆ.