ಉಡುಪಿ, ಏ.03 (DaijiworldNews/HR): ಕೊರೊನಾದ ಎರಡನೇ ಅಲೆ ತಡೆಗಟ್ಟುವ ಹಿನ್ನಲೆಯಲ್ಲಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಅದರಂತೆ ಎಲ್ಲರೂ ನಿಯಮವನ್ನು ಕಡ್ದಾಯವಾಗಿ ಪಾಲಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, "10, 11, 12ನೇ ತರಗತಿಗಳು ಈಗಿನಂತೆಯೇ ಮುಂದುವರಿಯಲಿದ್ದು ಹಾಜರಾತಿ ಕಡ್ಡಾಯವಲ್ಲ, ಆದರೆ ವಿದ್ಯಾಗಮ ಸೇರಿ 6-9ನೇ ತರಗತಿಗಳು ಸ್ಥಗಿತವಾಗಿದ್ದು, ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್ಗಳಲ್ಲಿ ಮಂಡಳಿ, ವಿವಿಗಳ ಪರೀಕ್ಷೆ ಬರೆಯುವ ಮತ್ತು ವೈದ್ಯಕೀಯ ಕೋರ್ಸ್ಗಳನ್ನು ಹೊರತುಪಡಿಸಿ ಉಳಿದೆಲ್ಲಾ ತರಗತಿಗಳು ಸ್ಥಗಿತವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಾಗೂ ಪ್ರಾಶುಂಪಾಲರಿಗೆ ಸೂಚನೆ ನೀಡಲಾಗಿದೆ" ಎಂದರು.
ಧಾರ್ಮಿಕ ಕ್ಷೇತ್ರಗಳಲ್ಲಿ ವೈಯಕ್ತಿಕ ಪ್ರಾರ್ಥನೆಗೆ ಮಾತ್ರ ಅವಕಾಶ ನೀಡಿದ್ದು, ಅಲ್ಲಿ ಗುಂಪು ಸೇರುವಂತಿಲ್ಲ, ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು ಜಿಲ್ಲೆಯಲ್ಲಿಯೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ಗಳಲ್ಲಿರುವ, ಸೇರುವ ಜಿಮ್, ಪಾರ್ಟಿ ಹಾಲ್ಗಳು, ಕ್ಲಬ್ ಹೌಸ್ಗಳು, ಈಜುಕೊಳಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಮ್ ಮತ್ತು ಈಜುಕೊಳ್ಳಗಳನ್ನು ಮುಚ್ಚಬೇಕು ಎಂದು ಸರ್ಕಾರ ತಿಳಿಸಿದ್ದು ಅದರಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಅದಕ್ಕೆ ಸಂಬಂಧಿಸಿದ ರಿಪೋರ್ಟ್ ನೀಡಲಿದ್ದಾರೆ ಎಂದರು.
ಇನ್ನು "ಸಾರ್ವಜನಿಕ ಸಾರಿಗೆಗಳಲ್ಲಿ ನಿಗದಿಪಡಿಸಿರುವ ಆಸನಕ್ಕಿಂತ ಹೆಚ್ಚಿನ ಜನ ನಿಂತುಕೊಂಡು ಪ್ರಯಾಣಿಸಲು ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದ್ದು, ಅದರಂತೆ ನಾವು ಆರ್ಟಿಓಗಳಿಗೆ ಸೂಚನೆ ನೀಡಿದ್ದೇವೆ" ಎಂದಿದ್ದಾರೆ.
ಯಾವುದೇ ರೀತಿಯಾ ರ್ಯಾಲಿ, ಧರಣಿ, ಮುಷ್ಕರಕ್ಕೆ ಅವಕಾಡವನ್ನು ನೀಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಇದ್ಯಾವುದಕ್ಕೂ ಅವಕಾಶ ಕೊಡುವುದಿಲ್ಲ" ಎಂದರು.
"ಜಿಲ್ಲೆಗಳಲ್ಲಿ ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ಗಳಲ್ಲಿ ಗರಿಷ್ಠ ಗ್ರಾಹಕರ ಸಂಖ್ಯೆ ಶೇ.50ನ್ನು ಮೀರುವಂತಿಲ್ಲ, ಪಬ್, ಬಾರ್, ಕ್ಲಬ್, ರೆಸ್ಟೋರೆಂಟ್ಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ವಾಷ್ ವ್ಯವಸ್ಥೆಗಳ ಕಡ್ಡಾಯ ಅಳವಡಿಕೆಗೆ ಸೂಚಿಸಿದ್ದು, ತಪ್ಪಿದಲ್ಲಿ ಕೊರೊನಾ ಕೊನೆಗೊಳ್ಳುವರೆಗೆ ಮುಚ್ಚಲಾಗುವುದು" ಎಂದಿದ್ದಾರೆ.
ಇನ್ನು ಶಾಪಿಂಗ್ ಮಾಲ್, ಮುಚ್ಚಿದ ಸ್ಥಳಗಳಲ್ಲಿರುವ ಮಾರ್ಕೆಟ್ಗಳು, ಡಿಪಾರ್ಟ್ಮೆಂಟ್ ಸ್ಟೋರ್ಗಳಿಗೂ ಈ ನಿಯಮ ಅನ್ವಯವಾಗಲಿದ್ದು, ತಪ್ಪಿದಲ್ಲಿ ಇವನ್ನೂ ಕೋವಿಡ್ ಕೊನೆಗೊಳ್ಳುವರೆಗೆ ಮುಚ್ಚಲಾಗುವುದು" ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳು, ಜಾತ್ರಾ ಮಹೋತ್ಸವಗಳು, ಮೇಳಗಳು, ಗುಂಪು ಸೇರುವುದನ್ನು ನಿಷೇಧಿಸಿದ್ದು, ವಿವಿಧ ಸಭೆ ಸಮಾರಂಭಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಜನರಷ್ಟೆ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇನ್ನು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆ - 2005, ಐಪಿಸಿ ಸೆಕ್ಷನ್ 188ರ ಅಡಿ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದ್ದು, ಈ ನಿಯಮ ಎಪ್ರಿಲ್ 20ರ ವರೆಗೆ ಮುಂದುವರೆಯಲಿದೆ" ಎಂದು ಹೇಳಿದ್ದಾರೆ.
"ದಯವಿಟ್ಟು ಎಲ್ಲರು ಈ ಎಲ್ಲ ನಿಯಮಗಳನ್ನು ಪಾಲಿಸಬೇಕು, ಇಲ್ಲದಿದ್ದಲ್ಲಿ ಲಾಕ್ಡೌನ್ ಅಂತಹ ದೊಡ್ದ ಪೆಟ್ಟನ್ನು ಅನುಭವಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.