ಮಂಗಳೂರು, ಎ.03 (DaijiworldNews/PY): ಮಂಗಳೂರಿನ ಅತ್ತಾವರದ 38 ವರ್ಷದ ಯುವಕ ದೋಹಾದ ಸೂಪರ್ ಮಾರ್ಕೆಟ್ನಲ್ಲಿ ಶಾಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.



ಮೃತರನ್ನು ಸಮೀರ್ ಅಹ್ಮದ್ ಉಮರ್ ಕೆಂಜಾರ್ ಎಂದು ಗುರುತಿಸಲಾಗಿದೆ.
ಸಮೀರ್ ತಾನು ವಾಸಿಸುತ್ತಿದ್ದ ರೂಮಿನ ಹತ್ತಿರವಿರುವ ಸೂಪರ್ ಮಾರ್ಕೆಟ್ನಲ್ಲಿ ಶಾಪಿಂಗ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದು, ಈ ವೇಳೆ ಯುವಕನನ್ನು ನೋಡಿದ ಸಾರ್ವಜನಿಕರು ಅವರನ್ನು ಆಂಬುಲೆನ್ಸ್ನಲ್ಲಿ ನಗರದ ಹಮದ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 29ರ ಬೆಳಿಗ್ಗೆ 2.05ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಸಮೀರ್ ಯಾರಲ್ಲೂ ಹೆಚ್ಚು ಸಂಪರ್ಕದಲ್ಲಿರದ ಕಾರಣ, ಮರಣದ ಮೂರು ದಿನಗಳ ನಂತರ ಮಾರ್ಚ್ 31ರ ರಾತ್ರಿ, ಹಮದ್ ಆಸ್ಪತ್ರೆಯ ಸಿಬ್ಬಂದಿಯ ಮುಖಾಂತರ ಮೃತರ ಕುಟುಂಬದವರಿಗೆ ಮಾಹಿತಿ ತಿಳಿಸಿದ್ದಾರೆ. ಸಮೀರ್ ಅವರು ಮೃತಪಟ್ಟ ವಿಚಾರ ತಿಳಿದ ಕತಾರ್ನಲ್ಲಿರುವ ಸಂಬಂಧಿಕರಾದ ಮುಸ್ತಾಫಾ ಹಾಗೂ ಜುಬೈರ್ ಅವರು ವಿಷಯವನ್ನು ಕತಾರ್ ಇಂಡಿಯನ್ ಸೋಷಿಯಲ್ ಫೋರಂನ ನಾಯಕರಿಗೆ ತಿಳಿಸಿದ್ದಾರೆ.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಇಂತಿಯಾಜ್ ಕಾರ್ನಾಡ್, ಬಷೀರ್ ಅಹ್ಮದ್, ಖಾಲಿದ್ ಮೊಹಸಿನ್ ಹಾಗೂ ವಜೀರ್ ಪುಂಜಾಲಕಟ್ಟೆ ಅವರನ್ನು ಒಳಗೊಂಡ ಕ್ಯೂಐಎಸ್ಎಫ್ ತಂಡ ಮೃತ ವ್ಯಕ್ತಿಯನ್ನು ಗುರುತಿಸಲು ಬೇಕಾದ ಮಾಹಿತಿಗಳನ್ನು ಕಲೆ ಹಾಕಿ, ಅವರ ಕುಟುಂಬದವರನ್ನು ಸಂಪರ್ಕಿಸಿ, ಕುಟುಂಬದವರ ಆದೇಶದ ಮೇರೆಗೆ, ಮೃತರನ್ನು ಕತಾರ್ನಲ್ಲಿಯೇ ಅಂತ್ಯಕ್ರಿಯೆ ಮಾಡಲು ಬೇಕಾದ ಅಪ್ಪಣೆ ಪತ್ರವನ್ನು ತರಿಸಿ, ಪೊಲೀಸ್ ಇಲಾಖೆ, ಆಸ್ಪತ್ರೆಯ ಹಾಗೂ ಭಾರತದ ಧೂತವಾಸದ ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಅಗತ್ಯವಾದ ಎಲ್ಲಾ ದಾಖಲೆಗಳನ್ನು ಕೇವಲ ಒಂದೇ ದಿನದಲ್ಲಿ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು.
ಕ್ಯೂಐಎಸ್ಎಫ್ ನಾಯಕರ ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ, ಎಪ್ರಿಲ್ 2ರ ಶುಕ್ರವಾರ ಸಂಜೆ ನಮಾಜಿನ ಬಳಿಕ ಕತಾರ್ನ ಅಬೂ ಹಮೂರ್ನಲ್ಲಿರುವ ದಫನ ಭೂಮಿಯಲ್ಲಿ ಸಮೀರ್ ಅವರ ಸಂಬಂಧಿಕರು ಹಾಗೂ ಇತರೆ ಸಂಘಟನೆಗಳ ಕೆಲವು ಸದಸ್ಯರ ಸಮ್ಮುಖದಲ್ಲಿ ಸಮೀರ್ ಅವರ ಅಂತ್ಯಕ್ರಿಯೆ ನೆರವೇರಿದೆ.
ಮೃತರು, ಪತ್ನಿ, ಇಬ್ಬರು ಮಕ್ಕಳು, ತಾಯಿ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.
ಸಮೀರ್ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಅವರ ಎಲ್ಲಾ ಕುಟುಂಬದ ಸದಸ್ಯರಿಗೂ ದಯಪಾಲಿಸಲಿ ಎಂದು ಕ್ಯೂಐಎಸ್ಎಫ್ ಪ್ರಾರ್ಥಿಸಿದೆ.