ಉಡುಪಿ, ಎ.03 (DaijiworldNews/MB) : ಕಳೆದ 80 ವರ್ಷಗಳಿಂದ ತರ್ಪಲ್, ಕಲ್ಲಕಂಬ ತೆಂಗಿನ ತರಗೆಲೆಗಳು ಹಾಕಿ ಜೀವನ ನಡೆಸುತ್ತಿದ್ದ ದಲಿತ ಸಮುದಾಯದ ಕಲ್ಮಾಡಿ ಬಾಬು ಕೆ. ಇವರಿಗೆ ಸ್ಥಳೀಯ ದಾನಿಗಳ ಸಹಕಾರದಿಂದ ರಚಿಸಿದ್ದ ನೂತನ ಮನೆ "ಅಯೋಧ್ಯೆ"ಗೆ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ವತಿಯಿಂದ ಉಚಿತ ವಿದ್ಯುತ್ ಸಂಪರ್ಕವನ್ನು ನೀಡಲಾಯಿತು.



ಇದರ ಸಂಪೂರ್ಣ ವೆಚ್ಚವನ್ನು ಇಂದು ತನ್ನ ಹುಟ್ಟುಹಬ್ಬ ಆಚರಿಸುತ್ತಿರುವ ಮೂಡುಬೆಳ್ಳೆ ಶಾಂತೇರಿ ಕಾಮಾಕ್ಷಿ ಜನರಲ್ ಸ್ಟೋರ್ಸ್ ನ ಅಶ್ವಿತ್ ನಾಯಕ್ ಮೂಡುಬೆಳ್ಳೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸು ಘರ್ ಘರ್ ಬಿಜಲಿ(ಮನೆಮನೆಗೆ ವಿದ್ಯುತ್) ಉಡುಪಿಯಲ್ಲಿ ಸಹೃದಯ ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. 2021ರ ಒಳಗೆ ಉಡುಪಿ ನಗರದ 100 ಶೇಕಡ ಮನೆಮನೆಗೆ ವಿದ್ಯುತ್ ನೀಡಿ ದೇಶದ ಮೊತ್ತಮೊದಲ ಸಂಪೂರ್ಣ ವಿದ್ಯುತ್ ಹೊಂದಿದ ನಗರ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಮಾಡಿ ವಾರ್ಡಿನ ನಗರಸಭಾ ಸದಸ್ಯರಾದ ಸುಂದರ ಜೆ,ಕಲ್ಮಾಡಿ, ಆಸರೆ ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಸತೀಶ್ ಕುಲಾಲ್, ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರಾದ ರಾಕೇಶ್ ಜೋಗಿ,ರಂಜಿತ್ ಕಲ್ಮಾಡಿ, ಮತ್ತು ಸ್ಥಳೀಯರು ಉಪಸ್ಥಿತರಿದ್ದರು.ಈ ಮನೆಯ ವಿದ್ಯುತ್ ಸಂಪರ್ಕ ವ್ಯವಸ್ಥೆಯ ನಿರ್ವಹಣೆಯನ್ನು ಕಡಿಯಾಳಿಯ ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ ಅಶ್ವತ್ಥ್ ದೇವಾಡಿಗ ನಿರ್ವಹಿಸಿದರು.