ಮಂಗಳೂರು, ಎ.04 (DaijiworldNews/MB) : ನಗರದ ಸ್ಟಾರ್ ರಾಕ್ ಅಪಾರ್ಟ್ಮೆಂಟ್ನ ಎರಡನೇ ಮಹಡಿಯ ಫ್ಲ್ಯಾಟ್ ಬೆಂಕಿಗೆ ಆಹುತಿಯಾದ ಘಟನೆ ಏಪ್ರಿಲ್ 3 ರ ಶನಿವಾರ ರಾತ್ರಿ 9 ಗಂಟೆಗೆ ಸಂಭವಿಸಿದೆ. ದೋಷಯುಕ್ತ ರೆಫ್ರಿಜರೇಟರ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿರುವುದು ಬೆಂಕಿಗೆ ಕಾರಣವೆಂದು ಶಂಕಿಸಲಾಗಿದೆ.





ಅಗ್ನಿಶಾಮಕ ದಳ ತಕ್ಷಣ ಘಟನಾ ಸ್ಥಳಕ್ಕೆ ಬಂದು ಅರ್ಧ ಘಂಟೆಯೊಳಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಯಾರೂ ಕೂಡಾ ಫ್ಲ್ಯಾಟ್ನಲ್ಲಿ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.
''ಮುಖ್ಯ ಬಾಗಿಲನ್ನು ಲಾಕ್ ಮಾಡಲಾಗಿತ್ತು. ನಾವು ಮನೆಯೊಳಗೆ ಪ್ರವೇಶ ಮಾಡಲು ಬಾಗಿಲು ಮುರಿಯಬೇಕಾಯಿತು'' ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.
''ಫ್ಲ್ಯಾಟ್ ಬಿ 2 ಡಾ. ನಿತಿನ್ ಸುವರ್ಣ ಅವರಿಗೆ ಸೇರಿದ್ದು, ಅವರು ಅಪಾರ್ಟ್ಮೆಂಟ್ನ್ನು ವಿದ್ಯಾರ್ಥಿಗಳಿಗೆ ಬಾಡಿಗೆಗೆ ನೀಡಿದ್ದಾರೆ'' ಎಂದು ಕಟ್ಟಡದ ನಿವಾಸಿ ಮಾಹಿತಿ ನೀಡಿದ್ದಾರೆ.
ಅಗ್ನಿ ಕಾಣಿಸಿಕೊಂಡ ಹಿನ್ನೆಲೆ ಇಡೀ ಕಟ್ಟಡಕ್ಕೆ ವಿದ್ಯುತ್ ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿತ್ತು. ಸುರಕ್ಷತಾ ಕ್ರಮವಾಗಿ ಕಾರ್ಯಾಚರಣೆಯ ಸಮಯದಲ್ಲಿ ಕಟ್ಟಡದಲ್ಲಿದ್ದವರನ್ನು ಸ್ಥಳಾಂತರಿಸಲಾಗಿತ್ತು.