ಮಂಗಳೂರು, ಸೆಪ್ಟೆಂಬರ್ 12: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ವಿರೋಧಿಸಿ ಸೆ ೧೦ ರಂದು ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಸಂದರ್ಭದಲ್ಲಿ ನಗರದ ಶಿವಭಾಗ್ ನಲ್ಲಿರುವ ಹೋಟೆಲ್ ಮೇಲೆ ಹೆಲ್ಮೆಟ್ ಧರಿಸಿ ಕಲ್ಲು ತೂರಾಟ ನಡೆಸಿದ್ದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಮರ್ ಸೋನ್ಸ್ (28) ಎಂದು ಗುರುತಿಸಲಾಗಿದೆ. ಈತನ ನಡೆ ದಕ್ಷಿಣ ಕನ್ನಡ ಕಾಂಗ್ರೆಸ್ ನಾಯಕರಿಗೆ ಮುಜುಗರ ತಂದಿದೆ.
ಭಾರತ್ ಬಂದ್ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ನಗರದ ಅಮರ್ , ಶಿವಭಾಗ್ ಹೊಟೇಲ್ಗೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಿಂದ ಹೊಟೇಲ್ ನಲ್ಲಿದ್ದ ಗ್ರಾಹಕರೊಬ್ಬರು ಗಾಯಗೊಂಡಿದ್ದರು. ಹೋಟೆಲ್ ಮೇಲೆ ಕಲ್ಲು ತೂರಾಟ ನಡೆಸಿದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಘಟನೆಯ ಕುರಿತು ನಗರದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಮರ್ ಸೋನ್ಸ್ ಯುವ ಕಾಂಗ್ರೆಸ್ ನ ಕಾರ್ಯಕರ್ತನಾಗಿದ್ದು. ಜಿಲ್ಲಾ ಯುವ ಕಾಂಗ್ರೆಸ್ ನ ನಾಯಕ ಮಿಥುನ್ ರೈ ಅವರ ಆಪ್ತ ಎನ್ನಲಾಗಿದೆ.