ಉಡುಪಿ, ಏ.04 (DaijiworldNews/HR): ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಏಪ್ರಿಲ್ 2 ರ ಶುಕ್ರವಾರ, ಉಡುಪಿ ಸೇರಿದಂತೆ ಎಂಟು ಜಿಲ್ಲೆಗಳಿಗೆ ಅನ್ವಯವಾಗುವಂತಹ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಆತಂಕದ ವಿಷಯವೆಂದರೆ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು.

ಮಾರ್ಚ್ 20 ರಂದು ಜಿಲ್ಲೆಯಲ್ಲಿ 66 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಮರುದಿನ 170 ಹೊಸ ಪ್ರಕರಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡವು. ಅವುಗಳಲ್ಲಿ 145 ಪ್ರಕರಣಗಳು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಸೇರಿವೆ. ಪ್ರಕರಣಗಳ ಸಂಖ್ಯೆ ಮಾರ್ಚ್ 22 ರಂದು 113, ಮಾರ್ಚ್ 25 ರಂದು 145 ಮತ್ತು ಮಾರ್ಚ್ 26 ರಂದು 210 ರಷ್ಟಿದೆ.
ಜಿಲ್ಲಾ ಕೊರೊನಾ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಶಾಲೆಗಳು ಮತ್ತು ಕಾಲೇಜುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿ ಬಳಿಕ ಪದೇ ಪದೇ ಸಲಹೆ ನೀಡಲಾಗಿದ್ದರೂ ಕೂಡ ವಿದ್ಯಾರ್ಥಿಗಳು ಪರಸ್ಪರ ಹತ್ತಿರ ಕುಳಿತು ಮಾತನಾಡುತ್ತಿರುವುದು ಕಂಡುಬರುತ್ತದೆ. ಅವರು ಮಾಸ್ಕ್ ಗಳನ್ನು ಸಹ ಬಳಸುವುದಿಲ್ಲ. ಹೆಚ್ಚಿನ ಪ್ರಕರಣಗಳು ಪ್ರಾಥಮಿಕ ಸಂಪರ್ಕಗಳಾಗಿವೆ. ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಪ್ರತಿ ಪ್ರಕರಣಕ್ಕೆ 20 ಪ್ರಾಥಮಿಕ ಸಂಪರ್ಕಗಳನ್ನು ಹುಡುಕುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಇನ್ನು ಪ್ರತಿದಿನ ಸುಮಾರು 2,300 ಮಾದರಿಗಳನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆ ಮತ್ತು ಎರಡು ಕೇಂದ್ರಗಳನ್ನು ಹೊಂದಿರುವ ಕೆಎಂಸಿ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗುತ್ತದೆ. ಇತರ ಪ್ರಯೋಗಾಲಯಗಳು ಕೇವಲ ಎರಡು ಶೇಕಡಾ ಪ್ರಕರಣಗಳಿಗೆ ಕಾರಣವಾಗಿವೆ. ಕೋವಿಡ್ನಿಂದ ಉಂಟಾಗುವ ಸಾವಿನ ಪ್ರಮಾಣ ಜನವರಿಯಿಂದ ಮಾರ್ಚ್ವರೆಗೆ ಶೇಕಡಾ 1.3 ರಷ್ಟಿದ್ದು, ಈ ಅವಧಿಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.