ಬಂಟ್ವಾಳ, ಏ.04 (DaijiworldNews/HR): ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಯುವಕನೋರ್ವನಿಗೆ ಚೂರಿ ಇರಿದು ಪರಾರಿಯಾದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಬ್ರಹ್ಮರಕೋಟ್ಲು ವಳವೂರು ನಿವಾಸಿ ಮನೋಜ್ ಸಪಲ್ಯ (30) ಎಂಬಾತ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಬಿಸಿರೋಡಿನ ಅಜ್ಜಿಬೆಟ್ಟು ಕ್ರಾಸ್ನಲ್ಲಿ ಯುವಕನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
ತುಂಬೆಯಿಂದ ಮನೋಜ್ ಅವರು ಬಿಸಿರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದು, ಇದನ್ನು ಗಮನಿಸಿದ ಮನೋಜ್ ಬಿಸಿರೋಡಿಗೆ ಆಗಮಿಸುತ್ತಿದ್ದಂತೆ ಅಜ್ಜಿಬೆಟ್ಟು ಕ್ರಾಸ್ನೊಳಗೆ ಬೈಕನ್ನು ತಿರುಗಿಸಿ ಅಂಗಡಿಯೊಂದರ ಮುಂಭಾಗದಲ್ಲಿ ನಿಲ್ಲಿಸಿದರು.ಆದರೆ ಬೈಕಿನಲ್ಲಿ ಹಿಂಬಾಳಿಸಿಕೊಂಡು ಬಂದ ದುಷ್ಕರ್ಮಿಗಳು ನಿಲ್ಲಿಸದಲ್ಲೇ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
ಮನೋಜ್ ಅವರು ವಿದೇಶದಲ್ಲಿ ಸಿವಿಲ್ ಇಂಜಿನಿಯರಿಂಗ್ ಉದ್ಯೋಗದಲ್ಲಿದ್ದು ಎರಡು ವಾರಗಳ ಹಿಂದೆಯಷ್ಟೆ ಊರಿಗೆ ಬಂದಿದ್ದು, ಅವರಿಗೆ ಎಪ್ರಿಲ್ ಅಂತ್ಯದಲ್ಲಿ ಮದುವೆ ನಿಶ್ಚಿಯವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಘಟನೆ ನಡೆದ ವಿಷಯ ತಿಳಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಇರಿತಕ್ಕೊಳಗಾದ ಮನೋಜ್ ಅವರಿಗೆ ಚಿಕಿತ್ಸೆ ನೀಡುವುದರ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.
ವೈಯಕ್ತಿಕ ಕಾರಣದಿಂದ ಚೂರಿ ಇರಿತ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಇದ್ದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಶಾಸಕರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರಿಗೆ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ, ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ಚೆಲುವರಾಜ್ ಬೇಟಿ ನೀಡಿ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.