ತಿರುವನಂತಪುರ, ಸೆ 12(MSP) : ಕೇರಳದಲ್ಲಿ ತಲೆದೋರಿದ್ದ ಭೀಕರ ಪ್ರವಾಹದ ವೇಳೆ ಸ್ಥಳೀಯರನ್ನು ರಕ್ಷಿಸುವ ಸಂದರ್ಭ, ಬೆನ್ನನ್ನೇ ಮೆಟ್ಟಿಲಾಗಿಸಿ, ಮಹಿಳೆಯರನ್ನು ಬೋಟ್ ಹತ್ತಿಸಿಕೊಂಡಿದ್ದ ಮೀನುಗಾರನಿಗೆ ಖ್ಯಾತ ವಾಹನ ತಯಾರಿಕಾ ಸಂಸ್ಥೆ ಮಹಿಂದ್ರಾ ಬಂಪರ್ ಉಡುಗೊರೆ ನೀಡಿ ಗೌರವಿಸಿದೆ.
ಕೇರಳದಲ್ಲಿ ಉಂಟಾದ ನೆರೆ ಸಂದರ್ಭ ಭಾರತೀಯ ಸೇನೆ, ಎನ್ ಡಿಆರ್ ಎಫ್ ಪಡೆ, ಅಸಂಖ್ಯಾತ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ವೇಳೆ ನೂರಾರು ಮೀನುಗಾರರು ತಮ್ಮದೇ ಬೋಟುಗಳನ್ನು ಹಿಡಿದು ರಕ್ಷಣಾ ಕಾರ್ಯದಲ್ಲಿ ಕೈ ಜೋಡಿಸಿದ್ದರು. ಈ ಸಂದರ್ಭ ಜೈಸೆಲ್ ಎಂಬ ಮೀನುಗಾರ ಅಪಾಯದಲ್ಲಿದ್ದ ಮಹಿಳೆಯರನ್ನು ಕಾಪಾಡುವುದಕ್ಕಾಗಿ ತನ್ನ ಬೋಟ್ ನೊಂದಿಗೆ ನೆರವಿಗೆ ಧಾವಿಸಿದ್ದು, ಸಂತ್ರಸ್ಥ ಮಹಿಳೆಯರು ಬೋಟ್ ಏರಲು ಕಷ್ಟವಾದಾಗ ತನ್ನ ಬೆನ್ನನ್ನೇ ಮೆಟ್ಟಿಲಾಗಿಸಿ ಮಹಿಳೆಯರಿಗೆ ನೆರವಾಗಿದ್ದ. ಇವರ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಕೇರಳ ಪ್ರವಾಹ ಕುರಿತು, ವಿಶ್ವಮಟ್ಟದಲ್ಲಿ ಗಮನ ಸೆಳೆಯಲು ಈ ವಿಡಿಯೋ ಕೂಡ ನೆರವಾಗಿತ್ತು. ಇದೀಗ ಜೈಸೆಲ್ ಅವರ ಸಮಾಜಮುಖಿ ಕೆಲಸವನ್ನು ಮಹಿಂದ್ರಾ ಸಂಸ್ಥೆ ಶ್ಲಾಘಿಸಿದ್ದು , ಜೈಸೆಲ್ ಕಾರ್ಯವನ್ನು ಮೆಚ್ಚಿ ಅವರಿಗೆ ಮಹಿಂದ್ರಾ ಸಂಸ್ಥೆ ಇತ್ತೀಚೆಗೆ ತಾನೆ ಬಿಡುಗಡೆ ಮಾಡಿದ ಹೊಚ್ಚ ಹೊಸ ಮಹೀಂದ್ರಾ ಮರಾಝೊ ಐಶಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದೆ.
ಈ ಹಿಂದೆ ಕೂಡ ಇದೇ ಮಹಿಂದ್ರಾ ಸಂಸ್ಥೆ ಅಥ್ಲೀಟ್ ಮೀರಾಭಾಯಿ ಚಾನು, ಮಂಗಳೂರಿನ ಹಳ್ಳಿ ಮನೆ ಅಕ್ಕಿ ರೊಟ್ಟಿ ಕ್ಯಾಂಟೀನ್ ನಡೆಸುವ ಮಹಿಳೆ ಶಿಲ್ಪಾ ಅವರಿಗೂ ಉಡುಗೊರೆ ನೀಡಿತ್ತು. ಅಂತೆಯೇ ತನ್ನ ಆಟೋವನ್ನೋ ಮಹಿಂದ್ರಾ ಕಾರಿನಂತೆ ಪರಿವರ್ತಿಸಿದ್ದ ಆಟೋ ರಿಕ್ಷಾ ಚಾಲಕನಿಗೂ ಕಾರು ಉಡುಗೊರೆ ನೀಡಿತ್ತು.