ಕಾಸರಗೋಡು, ಏ 5 (DaijiworldNews/MS): ಬಿಸಿಲ ಬೇಗೆಯ ನಡುವೆಯೂ ಕೇರಳ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಚುನಾವಣೆ ಸಿದ್ಧತೆ ಪೂರ್ಣಗೊಂಡಿದ್ದು , ನಾಳೆ ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ ಮತದಾನ ನಡೆಯಲಿದೆ.




ಮತದಾನ ಹಿನ್ನಲೆಯಲ್ಲಿ ಮತಗಟ್ಟೆಗೆ ತಲುಪಿಸುವ ಸಾಮಾಗ್ರಿಗಳನ್ನು ಇಂದು ಬೆಳಿಗ್ಗೆ ಜಿಲ್ಲೆಯ ಐದು ಕೇಂದ್ರಗಳಲ್ಲಿ ವಿತರಿಸಲಾಗಿದ್ದು , ಮಧ್ಯಾಹ್ನದ ವೇಳೆಗೆ ಆಯಾ ಮತಗಟ್ಟೆಗಳಿಗೆ ತಲುಪಿಸಲಾಗುವುದು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಐದು ಕೇಂದ್ರಗಳನ್ನು ತೆರೆಯಲಾಗಿದೆ. ಮಂಜೇಶ್ವರ ಕ್ಷೇತ್ರದ ಸಾಮಾಗ್ರಿಗಳನ್ನು ಕುಂಬಳೆ ಹಯರ್ ಸೆಕಂಡರಿ ಶಾಲೆ , ಕಾಸರಗೋಡು ಕ್ಷೇತ್ರದ ಮತಗಟ್ಟೆ ಸಾಮಾಗ್ರಿಗಳನ್ನು ಕಾಸರಗೋಡು ಸರಕಾರಿ ಕಾಲೇಜು , ಉದುಮ ಕ್ಷೇತ್ರದ ಸಾಮಾಗ್ರಿಗಳನ್ನು ಪೆರಿಯ ಸರಕಾರಿ ಪಾಲಿಟೆಕ್ಣಿಕ್ ಕಾಲೇಜು , ಕಾಞ0 ಗಾಡ್ ಕ್ಷೇತ್ರದ ಸಾಮಾಗ್ರಿಗಳನ್ನು ಪಡನ್ನಕಾಡ್ ನೆಹರೂ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜು , ತೃ ಕ್ಕರಿಪುರ ಕ್ಷೇತ್ರದ ಮತಗಟ್ಟೆ ಸಾಮಗ್ರಿಗಳನ್ನು ತ್ರಿಕ್ಕರಿಪುರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಿಂದ ವಿತರಿಸಲಾಯಿತು.
ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರಿಗೆ.!
ಐದು ಕ್ಷೇತ್ರಗಳಲ್ಲಿ 1591 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ 10, 59 , 967 ಮತದಾರರಿದ್ದು , ಈ ಪೈಕಿ 5, 18, 501 ಪುರುಷರು, 5, 41 , 460 ಮಂದಿ ಮಹಿಳೆಯರು , ಆರು ಮಂದಿ ಮಂಗಳಮುಖಿಯರು ಒಳಗೊಂಡಿದ್ದಾರೆ. ಚುನಾವಣಾ ಕರ್ತವ್ಯಕ್ಕೆ 9700 ಸಿಬಂದಿಗಳನ್ನು ನೇಮಿಸಲಾಗಿದೆ. ಈ ಬಾರಿ ಮತದಾನಕ್ಕೆ ಒಂದು ಗಂಟೆ ಅಧಿಕ ಅವಧಿ ನೀಡಲಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 7 ರ ತನಕ ಮತದಾನ ನಡೆಯಲಿದ್ದು , ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರು ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರು ಮತ ಚಲಾಯಿಸಬಹುದಾಗಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 2, 21, 682 ಮತದಾರರಿದ್ದು , 1,10,682 ಮಹಿಳಾ ಮತದಾರರಿದ್ದಾರೆ. ಕಾಸರಗೋಡಿನಲ್ಲಿ 2,01, 812 ಮತದಾರರಿದ್ದು , ಈ ಪೈಕಿ 1,01,233 ಮಹಿಳೆಯರು . ಉದುಮದಲ್ಲಿ 2, 14 , 209 ಮತದಾರರಿದ್ದು, 1,09, 580 ಮಂದಿ ಮಹಿಳಾ ಮತದಾರರಾಗಿದ್ದಾರೆ. ಕಾಞ0ಗಾಡ್ ನಲ್ಲಿ 2, 18, 385 ಮತದಾರರಿದ್ದು , 1,13, 732 ಮಹಿಳಾ ಮತದಾರರಿದ್ದಾರೆ. ತೃ 2,02,249 ಮಹಿಳಾ ಮತದಾರರಿದ್ದಾರೆ.
64 ಸೂಕ್ಷ್ಮ ಮತಗಟ್ಟೆಗಳು:
ಜಿಲ್ಲೆಯಲ್ಲಿ 64 ಸೂಕ್ಷ್ಮ ಮತಗಟ್ಟೆಗಳಿವೆ . 738 ಮತಗಟ್ಟೆಗಳಿಂದ ಲೈವ್ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ . 853 ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಸಜ್ಜುಗೊಳಿಸಲಾಗಿದೆ
ಜಿಲ್ಲೆಯ 20 ಗಡಿ ಚೆಕ್ ಪೋಸ್ಟ್ ಗಳಲ್ಲಿ ವಿಶೇಷ ನಿಗಾ ಇರಿಸಲಾಗಿದೆ. ಮತದಾರರಿಗೆ ಹಂಚಲು ಹಣ , ಮದ್ಯ ಹಾಗೂ ಇನ್ನಿತರ ವಸ್ತುಗಳನ್ನು ಸಾಗಾಟ ಮಾಡುವುದನ್ನು ತಡೆಗಟ್ಟಲು ಗಡಿಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಭದ್ರತೆಗಾಗಿ ಜಿಲ್ಲೆಯಲ್ಲಿ 3400 ಪೊಲೀಸರನ್ನು ನಿಯೋಜಿಸಲಾಗಿದೆ.712 ಮಂದಿಯನ್ನು ಒಳಗೊಂಡ ಕೇಂದ್ರ ಪಡೆ ಯನ್ನು ನಿಯೋಜಿಸಲಾಗಿದೆ.