ಸುರತ್ಕಲ್, ಏ 5 (DaijiworldNews/MS): ಸುರತ್ಕಲ್ ಗುಡ್ಡೆಕೊಪ್ಲ ಸಮೀಪ ಸಮುದ್ರ ತೀರದಲ್ಲಿ ಕೆಟ್ಟು ನಿಂತ 'ಭಗವತಿ ಪ್ರೇಮ್' ಡ್ರೆಜ್ಜರ್ ನ ಭದ್ರತಾ ಸಿಬ್ಬಂದಿಯ ಮೃತ ದೇಹ ಡ್ರೆಜ್ಜರ್ ಬಳಿ ಪತ್ತೆಯಾಗಿದೆ. ಮೃತ ಭದ್ರತಾ ಸಿಬ್ಬಂದಿಯನ್ನು ಉತ್ತರ ಕರ್ನಾಟಕ ಮೂಲದ ಶಂಕರ್ ಎಂದು ಗುರುತಿಸಲಾಗಿದೆ.

ಎನ್ಎಂಪಿಟಿ ಬಳಿಯ ಅರಬ್ಬೀ ಸಮುದ್ರದೊಳಗೆ ಆ್ಯಂಕರ್ ತುಂಡಾಗಿ ಅತಂತ್ರವಾಗಿದ್ದ 'ಭಗವತಿ ಪ್ರೇಮ್' ಎಂಬ ಹೆಸರಿನ ಡ್ರೆಜ್ಜರ್ ನ್ನು ಒಡೆಯಲು ಕಂಪನಿಯೊಂದು ಗುತ್ತಿಗೆ ಪಡೆದಿದ್ದು, ಇದಕ್ಕೆ ಇಬ್ಬರು ಕಾವಲು ಸಿಬ್ಬಂದಿಗನ್ನು ನೇಮಿಸಿತ್ತು. ಹೀಗಾಗಿ ಎಂದಿನಂತೆ ಅವರನ್ನು ಸ್ಥಳೀಯ ದೋಣಿ ಮೂಲಕ ಡ್ರೆಜ್ಜರ್ ನಲ್ಲಿ ಬಿಟ್ಟು ಬರಲಾಗಿತ್ತು. ಆದರೆ ಏ.4ರ ಭಾನುವಾರ ರಾತ್ರಿ 11 ಗಂಟೆಯವರೆಗೆ ಶಂಕರ್ ಜೊತೆಗೆ ಇನ್ನೋರ್ವ ಕಾವಲುಗಾರ ಇದ್ದರು ಎನ್ನಲಾಗಿದೆ. ಆದರೆ ಇಂದು ಬೆಳಗ್ಗೆ ಶಂಕರ್ ಮೃತದೇಹ ಡ್ರಜ್ಜರ್ ಬಳಿ ಪತ್ತೆಯಾಗಿದೆ. ಶಂಕರ್ ಕೆಲಸಕ್ಕೆ ನೇಮಕವಾಗಿ ಕೆಲ ದಿನಗಳಷ್ಟೇ ಆಗಿತ್ತು ಎನ್ನಲಾಗಿದೆ.
ಶಂಕರ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.