ಕಾರ್ಕಳ, ಸೆ 12(MSP): ಪ್ರಾಕೃತಿಕ ವಿಕೋಪ ಪರಿಶೀಲಿಸಲು ಕೇಂದ್ರದ ನಿಯೋಗ ಕಾರ್ಕಳ ತಾಲೂಕಿಗೆ ಭೇಟಿ ನೀಡಿದೆ. ಬಜಪೆ ವಿಮಾನ ನಿಲ್ದಾಣ ಮೂಲಕವಾಗಿ ವಾಹನಗಳಲ್ಲಿ ಬಂದಿದ್ದ ಈ ತಂಡವು ಕಾರ್ಕಳ ಕುಕ್ಕುಂದೂರು ಜಯಂತಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೊದಲಿಗೆ ಭೇಟಿ ನೀಡಿತು. ಪ್ರಾಕೃತಿಕ ವಿಕೋಪದಡಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿ, ಅಪಾಯಕಾರಿ ಸ್ಥಿತಿಯಲ್ಲಿದ್ದ ಶಾಲೆಯನ್ನು ಜಿಲ್ಲಾಧಿಕಾರಿಯ ಅದೇಶದ ಮೇರೆಗೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ನೆಲಸಮಗೊಳಿಸಲಾಗಿತ್ತು. ಈ ಕುರಿತು ಅಗತ್ಯ ಮಾಹಿತಿಗಳನ್ನು ಹಾಗೂ ಛಾಯಾಚಿತ್ರಗಳನ್ನು ಇದೇ ವೇಳೆಗೆ ಕೇಂದ್ರದ ನಿಯೋಗ ಸಂಗ್ರಹಿಸಿದೆ.
ಮಿಯ್ಯಾರು, ಮುಡಾರು, ರೆಂಜಾಳ, ಈದು ಗಾಮಗಳಿಗೆ ಭೇಟಿಯಾಗಿಲ್ಲದೇ ಸಾರ್ವಜನಿಕ ಸೊತ್ತು, ಸರಕಾರಿ ಸೊತ್ತು ಹಾನಿ ಕುರಿತು ಮಾಹಿತಿ ಹಾಕಿತು. ಈದು ನೂರಾಲ್ಬೆಟ್ಟು ಸೇತುವೆ ಹಾನಿಯ ಕುರಿತು ಪರಿಶೀಲನೆ ನಡೆಸಿದೆ. ಮಧ್ಯಾಹ್ನ ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನ ಸಭೆಯನ್ನು ನಡೆಸಿದ ತಂಡವು ಕಾಪುನತ್ತ ತೆರಳಿದೆ.ಕುಂದಾಪುರ ಸಹಾಯಕ ಕಮಿಷನರ್ ಭುಬಾಲನ್, ತಹಶೀಲ್ದಾರ್ ಮಹಮ್ಮದ್ ಇಸಾಕ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೇಬರ್ ಡಾ. ಹರ್ಷ, ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಲೋಕೋಪಯೋಗಿ ಇಲಾಖೆಯ ಹಿರಿಯ ಇಂಜಿನಿಯರ್ ಸುಂದರ್ ಮೊದಲಾದವರು ಉಪಸ್ಥಿತರಿದ್ದರು.
ಘಟನಾ ಸ್ಥಳಕ್ಕೆ ಶಾಸಕರ ಅಗಮನ
ತನಿಖಾ ತಂಡವು ಕುಕ್ಕುಂದೂರು ಜಯಂತಿನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗಮಿಸಿರುವ ಮಾಹಿತಿ ತಿಳಿದ ಶಾಸಕ ಹಾಗೂ ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್ಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ ಕೇಂದ್ರೀಯಾ ತನಿಖಾ ತಂಡದೊಂದಿಗೆ ಸಮಾಲೋಚನಾ ನಡೆಸಿದರು.