ಮಂಗಳೂರು, ಎ.05 (DaijiworldNews/MB) : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವುದಕ್ಕೆ ಅನೇಕ ಮಂದಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈಗ ವಿಮಾನ ನಿಲ್ದಾಣ ಹೆಸರು ಬದಲಾವಣೆ ವಿರೋಧಿಸುವ ಜನರು ತಮ್ಮ ಬೇಡಿಕೆ ಈಡೇರಿಕೆಗೆ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸುತ್ತಿದ್ದಾರೆ.

ಕರಾವಳಿ ಕರ್ನಾಟಕದ ಹಲವರು ಈ ವಿಮಾನ ನಿಲ್ದಾಣವನ್ನು ಖಾಸಗಿ ಒಡೆತನಕ್ಕೆ ಹಸ್ತಾಂತರಿಸುವುದರ ಬಗ್ಗೆ ಮತ್ತು ಅದರ ಹೆಸರಿನ ಬದಲಾವಣೆಯ ಬಗ್ಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಈ ಕಾರ್ಯಕರ್ತರು ಪತ್ರ ಬರೆದಿದ್ದರಿಂದ ಇತ್ತೀಚೆಗೆ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು ಮಂಗಳೂರು ವಿಮಾನ ನಿಲ್ದಾಣಕ್ಕೆ ನೋಟಿಸ್ ನೀಡಿತ್ತು.
ಆದ್ದರಿಂದ, ಈ ವಿಚಾರವು ನ್ಯಾಯಾಲಯಕ್ಕೆ ತಲುಪುವ ಬಗ್ಗೆ ಹರಿಯುವ ಸಾಧ್ಯತೆಗಳು ಅಧಿಕವಾಗಿದೆ. ಕಾರ್ಯಕರ್ತರು ಕಾನೂನು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಲು ಮತ್ತು ನಂತರ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಚಿಂತನೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ದಿಲ್ರಾಜ್ ಆಳ್ವ, ''ವಿಮಾನ ನಿಲ್ದಾಣದ ಮರುನಾಮಕರಣದಿಂದಾಗಿ ಮಂಗಳೂರಿನ ಬ್ರಾಂಡ್ ಮೌಲ್ಯವನ್ನು ಕಳೆದುಕೊಳ್ಳಬಾರದು. ತುಳುನಾಡಿನ ಹೆಮ್ಮೆಯ ವೀರರಾದ ಕೋಟಿ ಚೆನ್ನಯ್ಯ ಅಥವಾ ಅವರಂತಹ ವ್ಯಕ್ತಿಗಳ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬಹುದು'' ಎಂದು ಅಭಿಪ್ರಾಯಿಸಿದ್ದಾರೆ.