ಉಡುಪಿ, ಏ.05 (DaijiworldNews/HR): "ಉಡುಪಿಯಲ್ಲಿ ಶೇ. 0.75 ರಷ್ಟು ಕೊರೊನಾದಿಂದ ಸಾವಿನಪ್ಪಿದವರ ಪ್ರಮಾಣ ಆಗಿದ್ದು, ಇದರಲ್ಲಿ ನಮ್ಮ ಖಾಸಗಿ ಹಾಗೂ ಸರ್ಕಾರಿ ಆರೋಗ್ಯ ಇಲಾಖೆ ಅಧಿಕಾರಿಗಳೂ ಅತ್ಯುತ್ತಮ ಕೆಲಸ ಮಾಡಿದ್ದು, ದೇಶದಲ್ಲೇ ಇಷ್ಟು ಕಡಿಮೆ ಸಾವಿನ ಪ್ರಕರಣ ದಾಖಲಾಗಿರುವ ಜಿಲ್ಲೆಗಳಲ್ಲಿ ಉಡುಪಿ ಒಂದಾಗಿರುವುದು ಇತರ ರಾಜ್ಯ ಹಾಗೂ ಜಿಲ್ಲೆಗೆ ಮಾದರಿಯಾಗಿದೆ" ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, "ನಮ್ಮ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ಅತ್ಯಂತ ಕಡಿಮೆಯಾಗಿದ್ದು, ಅದಕ್ಕಾಗಿ ಆರೋಗ್ಯ ಸಿಬ್ಬಂದಿಗಳು ಜೀವ ಉಳಿಸಲು ಸದಾ ಹೋರಾಟ ನಡೆಸಿ ಅದರಲ್ಲಿ ನಾವು ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿಯೂ ಇದೇ ರೀತಿಯ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಭರವಸೆ ನೀಡುತ್ತೇನೆ" ಎಂದರು.
ಉಡುಪಿಯ ಎಮ್ಐಟಿ ಕ್ಯಾಂಪಸ್ನಲ್ಲಿ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಎಮ್ಐಟಿಯನ್ನು ಕಂಟೈನ್ಮೆಂಟ್ ಝೋನ್ ಮಾಡಿದ್ದು ಶೇ. 15ರಷ್ಟು ಈಗ ಅಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿದೆ. ನಮ್ಮ ಆರೋಗ್ಯ ಇಲಾಖೆ ಅಲ್ಲಿ ಕೆಲಸ ಮಾಡಿದ್ದರಿಂದ ಸಾಧ್ಯವಾಯಿತು, ಜೊತೆಗೆ ಮಾಂಡೊವಿ ಅಪಾರ್ಟ್ಮೆಂಟ್, ಎರಡು ಶಾಲೆಗಳಲ್ಲಿ ಕೇಸ್ ಜಾಸ್ತಿ ಆದ ಕಾರಣ ಅಲ್ಲಿ ಕೂಡ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ" ಎಂದರು.
"ದೇಶದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದಲ್ಲಿ ಕೊರೊನಾವನ್ನು ಮೆಟ್ಟಿನಿಲ್ಲಲು ಸಾಧ್ಯ" ಎಂದಿದ್ದಾರೆ.
ಇನ್ನು ಶಾಲೆ ಕಾಲೇಜು ವಿದ್ಯಾರ್ಥಿಗಳಲ್ಲಿ ಅತ್ಯಂತ ಅಧಿಕ ಕೊರೊನಾ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಅವರಿಂದ ಅವರ ಮನೆಯಲ್ಲಿರುವ ಹಿರಿಯರಿಗೆ ಕೊರೊನಾ ಹರಡುವ ಹೆಚ್ಚು ಸಾಧ್ಯತೆಗಳಿರುವ ಕಾರಣ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದೆ ಎಂದು ಹೇಳಿದ್ದಾರೆ.