ಉಡುಪಿ, ಏ.05 (DaijiworldNews/HR): 2017-18 ರಲ್ಲಿ ರೂ 7.5 ಲಕ್ಷ ಮೊತ್ತದ ಬಾವಿ ಕೆಲಸವನ್ನು ಓರ್ವ ಕಾಂಟ್ರಾಕ್ಟರ್ ಟೆಂಡರ್ ವಹಿಸಿಕೊಂಡು ಕೆಲಸ ಮಾಡಿ ಕೊಟ್ಟರೂ, ನೀರಿನ ಮಟ್ಟ ನಿರಿಕ್ಷೆಯಷ್ಟು ಇಲ್ಲ ಎನ್ನುವ ಕ್ಷುಲ್ಲಕ ಕಾರಣ ನೀಡಿ ಕೆಆರ್ಡಿಎಲ್ ರೂ 7.5 ಲಕ್ಷ ನೀಡಿದ್ದರೂ ಐಟಿಡಿಪಿ ಇಲಾಖೆಯಿಂದ ಕಾಂಟ್ರಾಕ್ಟರ್ಗೆ ಹಣ ಬಿಡುಗಡೆ ಮಾಡದೆ ಅಧಿಕಾರಿಯೋರ್ವರು ಸತಾಯಿಸುತ್ತಿದ್ದಾರೆ ಎಂದು ಸಿದ್ದಾಪುರದ ಜಿಲ್ಲಾ ಪಂಚಾಯತ್ ಸದಸ್ಯರಾದ ರೋಹಿತ್ ಕುಮಾರ್ ಶೆಟ್ಟಿ ಸಭೆಯಲ್ಲಿ ಆರೋಪಿಸಿದರು.





ರೋಹಿತ್ ಅವರು ಐಟಿಡಿಪಿ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡಿದ್ದಲ್ಲದೆ, ಬಿಲ್ ಹಣ ಪಾವತಿ ಮಾಡಲು ಯಾಕೆ ಸಾತಾಯಿಸುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟನೆ ನೀಡಬೇಕು ಎಂದರು. ನಂತರ ಮಾತನಾಡಿದ ಅಧಿಕಾರಿ ಈಗ ಸದ್ಯ ರೂ. 4.5 ಲಕ್ಷ ರೂ ಪಾವತಿ ಮಾಡಿದ್ದು ಇನ್ನು 3 ಲಕ್ಷ ಪಾವತಿ ಮಾಡಲು ಬಾಕಿ ಇದೆ ಎಂದರು.
ಬಾವಿ ಕೊರೆಯುವ ಕಾಮಗಾರಿಗಳಿಂದ ಅಧಿಕಾರಗಳು ಹಲವಾರು ರೀತಿಯಲ್ಲಿ ಭ್ರಷ್ಟಾಚಾರ ನಡೆಯುತ್ತದೆ. ಎಷ್ಟೋ ಬಾರಿ ಬಾವಿಗೆ ಕೇವಲ ಒಂದು ರಿಂಗ್ ಹಾಕಿ ಕೆಲಸದಲ್ಲಿ ಗೋಲ್ ಮಾಲ್ ಮಾಡುತ್ತಾರೆ. ಇದು ಒಂದು ರೀತಿಯ ದಂಧೆಯಾಗಿ ಬಿಟ್ಟಿದೆ. ಒಂದು ವರ್ಷದಲ್ಲಿ ಆಗಭೇಕಾದ ಕೆಲಸವನ್ನು ಮತ್ತೊಂದು ವರ್ಷಕ್ಕೂ ಮುಂದೆ ಹಾಕುತ್ತಾರೆ ಈ ರೀತಿಯ ಕೆಲಸದ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂದು ಜಿ. ಪಂ. ಸದಸ್ಯ ಜನಾರ್ಧನ್ ತೋನ್ಸೆ ಆಗ್ರಹಿಸಿದರು. ಅಲ್ಲದೆ ಮಂಗಗಳ ಹಾವಳಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದು ಕೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಜಿಲ್ಲೆಯಲ್ಲಿ 51 ಭೂ ಪರವಾನಿಗೆ ಸರ್ವೇಯರ್ ಇದ್ದು, ಅವರು ಜಿಲ್ಲಾದ್ಯಾಂತ ಮುಷ್ಕರ ಹೂಡಿರುವ ಹಿನ್ನೆಯಲ್ಲಿ ಇಂದು ಉಡುಪಿಯ ಜನತೆ ಮೂರು ತಿಂಗಳಿಂದ ಜಾಗದ ಗಡಿ ಗುರುತಿಸಲು ಸಾಧ್ಯವಾಗದೆ ಪರದಾಡುವ ಸ್ಥಿತಿ ಎದುರಾಗಿದೆ. ಈಗ ಸುಮಾರು 3426 ಅರ್ಜಿಗಳು ಸ್ವೀಕೃತವಾಗಿವೆ. ಇನ್ನಷ್ಟು ಅರ್ಜಿಗಳು ಬಾಕಿ ಇದ್ದು ಜಾಗಕ್ಕೆ ಸಂಬಂಧ ಪಟ್ಟ ಸರ್ವೇಗೆ ಕೆಲಸಗಳು ಬಾಕಿ ಉಳಿದಿವೆ, ಎಂದು ಜಿ.ಪಂ. ಸದಸ್ಯೆ ರೇಷ್ಮಾ ಸಭೆಯಲ್ಲಿ ದೂರಿದರು.
ಜಿ.ಪಂ. ಸದಸ್ಯ ಬಾಬು ಶೆಟ್ಟಿ ಮಾತನಾಡಿ, "ಕಿಂಡಿ ಅಣೆಕಟ್ಟು ಮಾಡುವಾಗ ಹೂಳೆತ್ತುವುದು, ಹೊಯ್ಗೆ ತೆಗೆಯುವುದು ಸಣ್ಣ ನೀರಾವರಿ ಇಲಾಖೆಗೆ ದೊಡ್ಡ ದಂಧೆಯಾಗಿ ಬಿಟ್ಟಿದೆ. ಹಾಗಾಗಿ, ಇದನ್ನು ಸರಿಯಾದ ಕ್ರಮದಲ್ಲಿ ವಿಚಾರಣೆ ಆಗಬೇಕು" ಎಂದು ಒತ್ತಾಯಿಸಿದರು.
ಉಡುಪಿ ಜಿಲ್ಲೆಯಲ್ಲಿ ಮಾಂಸಾಹಾರಿ ಕೋಳಿ ತ್ಯಾಜ್ಯ, ತ್ಯಾಜ್ಯ ವಿಲೇವಾರಿವುದು ದೊಡ್ಡ ಸವಾಲಾಗಿದೆ. ಇಗಾಗಲೇ 155 ಪಂಚಾಯತ್ ಕಸ ವಿಲೇವಾರಿ ಘಟಕ ಇದೆ. 2-3 ಕಡೆ ಮಾತ್ರ ಗೊಬ್ಬರ ತಯಾರಿಸುವ ಘಟಕಗಳನ್ನ ಪ್ರಾಯೋಗಿಕವಾಗಿ ತೆರೆಯಲಾಗಿದೆ. ಇನ್ನು ಮರುಬಳಕೆಯಾಗದ ತ್ಯಾಜ್ಯಗಳನ್ನ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದೆ ಎಂದು ಯೋಜನಾಧಿಯಾದ ಶ್ರೀನಿವಾಸ್ ತಿಳಿಸಿದರು.
ಎಲ್ಲೆಂದರಲ್ಲಿ ಕಸ ಬಿಸಾಡುವವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಮತ್ತು ರೂ 5,000 ಕ್ಕಿಂತಲೂ ಹೆಚ್ಚು ದಂಡ ವಿಧಿಸಭೇಕು ಮತ್ತು ಸಭೆಯಲ್ಲಿ ಕೂಡಲೇ ನಿರ್ಣಯ ತೆಗೆದುಕೋಂಡು ಎಲ್ಲಾ ಪಂಚಾಯತ್ ಸುತ್ತೋಲೆ ಕಳುಹಿಸಬೇಕು ಎಂದು ದಿವ್ಯ ಅಮೀನ್ ಆಗ್ರಹಿಸಿದರು.
ಸಭೆಯಲ್ಲಿ ನವೀನ್ ಭಟ್, ಜಿ.ಪಂ. ಮುಖ್ಯ ನಿರ್ವಹಣಾಧಿಕಾರಿ, ದಿನಕರ್ ಬಾಬು, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಶೀಲಾ ಕೆ ಶೆಟ್ಟಿ, ಉಪಾಧ್ಯಕ್ಷರು, ಸುಮಿತ್ ಶೆಟ್ಟಿ, ಅಧ್ಯಕ್ಷರು, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ, ಶೋಭಾ ಜಿ ಪುತ್ರನ್, ಅಧ್ಯಕ್ಷರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪ್ರತಾಪ್ ಹೆಗ್ಡೆ ಮಾರಾಳಿ, ಅಧ್ಯಕ್ಷರು, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಉಪಸ್ಥಿತರಿದ್ದರು.