ಉಡುಪಿ, ಏ.05 (DaijiworldNews/HR): "ಇತ್ತೀಚಿನ ದಿನಗಳಲ್ಲಿ ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ದೃಢಪಟ್ಟ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗುತ್ತಿದೆ ಹಾಗೂ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಗುಂಪು ಗುಂಪಾಗಿ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಕೊರೊನಾದ ಎರಡನೇ ಅಲೆಯು ಕಂಡುಬರುವ ಆತಂಕ ಎದುರಾಗಿದ್ದು, ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಚಟುವಟಿಕೆಗಳನ್ನು ತೀವ್ರಗೊಳಿಸಲಾಗುತ್ತದೆ" ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಅದರಂತೆ ಈ ನಿಟ್ಟಿನಲ್ಲಿ ಸಮುದಾಯದ ಕೆಲವು ನಿರ್ದಿಷ್ಟ ವರ್ಗಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಂಡು ಯಾದೃಚ್ಛಿಕವಾಗಿ ತಪಾಸಣೆಗೆ ಒಳಪಡಿಸಿ ಸ್ವ್ಯಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಬೇಕಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಕೊರೊನಾ ರೆಗ್ಯೂಲೇಶನ್ 2020 ಅಧಿಸೂಚನೆಯನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ, ಈ ಕೆಳಕಂಡಂತೆ ಆದೇಶಿದ್ದಾರೆ.
ಜಿಲ್ಲೆಯಲ್ಲಿರುವ ಎಲ್ಲಾ ಮಾಲ್ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು, ಬಟ್ಟೆ ಮಳಿಗೆಗಳು, ಎಲೆಕ್ಟ್ರಾನಿಕ್ ಉಪಕರಣಗಳ ಸ್ಟೋರ್ ಗಳು, ಅಂಗಡಿಗಳಂತಹ ಎಲ್ಲಾ ಆಹಾರ ವಿತರಕ ಸಂಸ್ಥೆಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳವರು, ಸಿನಿಮಾ ಮಂದಿರಗಳವರು ತಮ್ಮ ವ್ಯಾಪ್ತಿಗೆ ಸೇರಿದ ತಾಲೂಕು ಆರೋಗ್ಯಾಧಿಕಾರಿ (ಉಡುಪಿ:0820 2526428 ಕುಂದಾಪುರ :08254-230730,ಕಾರ್ಕಳ:08258-231788) ಯವರನ್ನು ಸಂಪರ್ಕಿಸಿ ದಿನಾಂಕವನ್ನು ನಿಗದಿಪಡಿಸಿಕೊಂಡು ತಮ್ಮ ಸಂಸ್ಥೆಯ ಎಲ್ಲಾ ಅಧಿಕಾರಿ, ಸಿಬ್ಬಂದಿಯವರಿಗೆ ಕಡ್ಡಾಯವಾಗಿ ಕೋವಿಡ್-19 ತಪಾಸಣೆ ಮಾಡಿಸಬೇಕು.
ತಮ್ಮ ಸಂಸ್ಧೆಗಳ ಪ್ರವೇಶ ದ್ವಾರಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಗಳನ್ನು ಇರಿಸಬೇಕು, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ ಅಥವಾ ಆಗಾಗ್ಗೆ ಸಾಬೂನಿನಿಂದ ಕೈತೊಳೆದು ಕೊಳ್ಳುವುದು ಮುಂತಾದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಇನ್ನು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊರಡಿಸಿದ ಮಾರ್ಗಸೂಚಿ/ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು, ಇದಕ್ಕೆ ತಪ್ಪಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ಯ ಅನ್ವಯ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಸಂಬಂಧಿಸಿದ ಸಂಸ್ದೆಗಳ ಪರವಾನಿಗೆಯನ್ನು ಕೋವಿಡ್-19 ಮುಕ್ತಾಯವಾಗುವ ತನಕ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.