ಕಾಸರಗೋಡು, ಏ.05 (DaijiworldNews/HR): ಕೇರಳ ವಿಧಾನಸಭಾ ಚುನಾವಣೆ ಮಂಗಳವಾರ ನಡೆಯಲಿದ್ದು, ಬೆಳಿಗ್ಗೆ 7 ರಿಂದ ಸಂಜೆ 7ರ ತನಕ ಮತದಾನ ನಡೆಯಲಿದೆ. ಈ ಬಾರಿ ಮತದಾನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ.

ಕೊನೆಯ ಒಂದು ಗಂಟೆ ಕೊರೊನಾ ಸೋಂಕಿತರಿಗೆ ಹಾಗೂ ಸೋಂಕಿತರ ಸಂಪರ್ಕದವರಿಗೆ ಮತ ಚಲಾಯಿಸಲು ಅನುವು ಮಾಡಿಕೊಡಲಾಗಿದೆ.
ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡ್, ತೃಕ್ಕರಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,591 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. 10,58,337 ಮಂದಿ ತಮ್ಮ ಹಕ್ಕುಚಲಾಯಿಸಲಿದ್ದಾರೆ.
ಮತಗಟ್ಟೆಗಳಿಗೆ ಜಿಲ್ಲೆಯ ಐದು ಕೇಂದ್ರಗಳಿಂದ ಸಾಮಾಗ್ರಿ ಗಳನ್ನು ಆಯಾ ಮತಗಟ್ಟೆಗಳಿಗೆ ತಲಪಿಸಲಾಗಿದೆ.
ಪ್ರತಿ ಕ್ಷೇತ್ರಕ್ಕೆ ಒಂದೊಂದು ಕೇಂದ್ರವನ್ನು ಈ ಬಾರಿ ವ್ಯವಸ್ಥೆ ಗೊಳಿಸಲಾಗಿದ್ದು, 9700 ಸಿಬಂದಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಕೊರೊನಾ ಮಾನದಂಡ ಪಾಲಿಸಿ ಚುನಾವಣೆ ನಡೆಸಲಾಗುವುದು.