ಮಂಗಳೂರು, ಏ. 5 (DaijiworldNews/SM): ಕೋವಿಡ್-19 ಸೋಂಕಿನ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ರೂಪಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಪಾಲಿಸಬೇಕು ಎಂದು ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಸೂಚನೆ ನೀಡಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕುರಿತು ಹೋಟೆಲ್, ರೆಸ್ಟೋರೆಂಟ್, ಕಲ್ಯಾಣ ಮಂಟಪ, ಪಾರ್ಟಿಹಾಲ್, ಬಾರ್ ಎಂಡ್ ರೆಸ್ಟೋರೆಂಟ್, ಸಿನಿಮಾ ಹಾಲ್, ಈಜುಕೊಳ, ಜಿಮ್ ಅಸೋಸಿಯೇಶನ್ ಹಾಗೂ ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಶನ್ ಮಾಲಿಕರು ಹಾಗೂ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಪ್ರಸ್ತುತ ಕೋವಿಡ್ 19 ಪ್ರಕರಣಗಳು ಸತತವಾಗಿ ಏರಿಕೆಯಾಗುತ್ತಿರುವುದರಿಂದ ಸರ್ಕಾರದ ಆದೇಶವನ್ನು ಪಾಲಿಕೆ ವ್ಯಾಪ್ತಿಯೊಳಗೆ ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸುಬೇಕು ಎಂದರು. ಕೋವಿಡ್ ಮುನ್ನೆಚ್ಚರಿಕೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಪಾಲನೆ, ಹ್ಯಾಂಡ್ ಸ್ಯಾನಿಟೈಸರ್, ಹ್ಯಾಂಡ್ ವಾಷ್ಗಳ ಬಳಕೆಯನ್ನು ಜಾರಿಗೊಳಿಸುವುದು ಹಾಗೂ ಸರ್ಕಾರದ ಸೂಚನೆಯಂತೆ ಬಾರ್, ಪಬ್, ಕ್ಲಬ್, ರೆಸ್ಟೊರೆಂಟ್, ಸಿನೆಮಾ ಹಾಲ್, ಜಿಮ್ಗಳಲ್ಲಿ ಗರಿಷ್ಟ 50 ಸಂಖ್ಯೆ ಮೀರಿರಬಾರದು ಹಾಗೂ ಎಲ್ಲಾ ರೀತಿಯ ಈಜುಕೊಳಗಳನ್ನು ಈ ಕೂಡಲೇ ಮುಚ್ಚುವಂತೆ ಸೂಚನೆ ನೀಡಿದರು.
ಕೋವಿಡ್ ಶಿಷ್ಟಚಾರಗಳು ಪಾಲನೆಯಾಗುತ್ತಿರುವ ಬಗ್ಗೆ ಪಾಲಿಕೆ ವತಿಯಿಂದ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಂಡ ಟಾಸ್ಕ್ಪೋರ್ಸ್ ತಂಡವನ್ನು ರಚಿಸಿ ನಿರಂತರ ಪರಿಶೀಲನೆಗೆ ಒಳಪಡಿಸಲಾಗುವುದು. ಈ ವೇಳೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಕಂಡುಬಂದಲ್ಲಿ ಅಂತಹ ವಾಣಿಜ್ಯ ಸಂಸ್ಥೆಯ ಮಾಲಕರ ವಿರುದ್ಧ ದಂಡ ವಿಧಿಸಲಾಗುವುದು, ಪುನಾರವರ್ತನೆಯಾದಲ್ಲಿ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಕೊನೆಗೊಳ್ಳುವವರೆಗೆ ಮುಚ್ಚಲಾಗುವುದು ಎಂಬ ಎಚ್ಚರಿಕೆ ನೀಡಲಾಯಿತು.