ಉಡುಪಿ, ಏ. 5 (DaijiworldNews/SM): ಕೊರೊನಾ ಸೋಂಕು ದೇಶದಿಂದ ಮುಕ್ತಗೊಳಿಸಲು ಕೋವಿಡ್ ಲಸಿಕೆ ಅಭಿಯಾನವು ಸರಕಾರದಿಂದ ಪ್ರಾರಂಭಗೊಂಡಿದೆ, ಆಧಾರ್ ತೋರಿಸಿ ಲಸಿಕೆ ಪಡೆಯಲು ಅವಕಾಶವಿದ್ದು, ವಲಸೆ ಕಾರ್ಮಿಕರು, ಅಲೆಮಾರಿಗಳು, ನಿರ್ಗತಿಕರು, ಚಿಂದಿ ಆರಿಸುವವರು, ಭಿಕ್ಷುಕರು, ಬಸ್ಸು ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನೆಲೆಕಂಡಿರುವ ಅಸಹಾಯಕರು, ಹಾಗೂ ಅನಾಥಾಶ್ರಮಗಳಲ್ಲಿ ಆಶ್ರಯ ಪಡೆದಿರುವರು, ಇವರಲ್ಲಿ ಯಾರಲ್ಲಿಯೂ ಸಾಮಾನ್ಯವಾಗಿ ಆಧಾರ್ ಚೀಟಿ ಇರುವುದಿಲ್ಲ. ಈ ಹಿನ್ನೆಲೆ ಲಸಿಕೆ ಪಡೆಯಲು ಅವಕಾಶ ನೀಡಲು ಮನವಿ ಮಾಡಲಾಗಿದೆ.

ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಲು, ಲಸಿಕೆ ಪಡೆಯಬೇಕಾದ ವ್ಯಕ್ತಿ ಆಧಾರ್ ಚೀಟಿಯನ್ನು ತೊರ್ಪಡಿಸುವ ನಿಯಮ ಇದೆ. ನಿಯಮದಂತೆ ಲಸಿಕೆ ಪಡೆಯಲು ಅರ್ಹರಿರುವರು ಆಧಾರ್ ಚೀಟಿಯನ್ನು ಲಸಿಕಾ ಕೇಂದ್ರಗಳಲ್ಲಿ ತೋರ್ಪಡಿಸಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.
ಅನೇಕ ಮಂದಿ ಶ್ರೀಸಮಾನ್ಯನ ಅಧಿಕಾರ ಆಧಾರ್ ಚೀಟಿ ಇಲ್ಲದೆ, ಕೋವಿಡ್ ಲಸಿಕೆ ಪಡೆಯಲು ಅಸಹಾಯಕರಾಗಿದ್ದಾರೆ. ಇವರೆಲ್ಲರು ಕೊರೊನಾ ಸೋಂಕಿಗೆ ತುತ್ತಾಗುವ, ಮತ್ತೆ ಇವರಿಂದ ಸೋಂಕು ಸಾರ್ವಜನಿಕ ವಲಯದಲ್ಲಿ ಹರಡುವ ಸಾಧ್ಯತೆಗಳು ಇರುತ್ತವೆ. ನಾಗರಿಕ ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಬದುಕುವ ಹಕ್ಕಿದೆ. ಹಾಗಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಸಹಾಯಕ ವ್ಯಕ್ತಿಗಳಿಗೆ ಪರ್ಯಾಯ ವ್ಯವಸ್ಥೆಯಲ್ಲಿ ಕೋವಿಡ್ ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.