ಮಂಗಳೂರು, ಎ.06 (DaijiworldNews/MB) : ಕರ್ನಾಟಕ ಕೇರಳ ಗಡಿ ಭಾಗದ ಸಾಲೆತ್ತೂರಿನ ಕೊಡಂಗೆಯೆ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ಸಂದರ್ಭ ವಿಟ್ಲ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪಾರಾರಿಯಾಗಿದ್ದ ನಾಲ್ವರು ದುಷ್ಕರ್ಮಿಗಳನ್ನು ಪೊಲೀಸರು ಸೋಮವಾರ ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಬಂಧಿಸಿದ್ದಾರೆ. ಈ ಪೈಕಿ ಓರ್ವ ಈ ಕುಖ್ಯಾತ ಡಿ ಸ್ಕಾಡ್ ಗ್ಯಾಂಗ್ನ ನಾಯಕ ಕೂಡಾ ಆಗಿದ್ದಾನೆ.


ಬಂಧಿತರನ್ನು ಅಸ್ಫಾಖ್ ಮಿಯಾಪದವು, ಶಾಕಿರ್ ಮಿಯಾಪದವು, ಲತೀಫ್ ಮಿಯಾಪದವು, ಈ ಗ್ಯಾಂಗ್ನ ಮುಖ್ಯಸ್ಥ ರೆಹಮಾನ್ ಮೀಯಾಪದವು, ಮಹಾರಾಷ್ಟ್ರ ಮೂಲದ ರಾಕೇಶ್, ಕೂವಾ ಫಯಾಜ್, ಮಿಯಾಪದವಿನ ಮಂಗಲ್ಪಾಡಿ ನಿವಾಸಿ ಹೈದರ್ ಆಲಿ ಅಲಿಯಾಸ್ ಹೈದರ್ ಎಂದು ಗುರುತಿಸಲಾಗಿದೆ.
ಮಾರ್ಚ್ 9 ರಂದು ಕಾಸರಗೋಡು ಜಿಲ್ಲೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಮಿಯಪದವು ಪರಿಸರದಲ್ಲಿ ಕ್ರಿಮಿನಲ್ ಹಿನ್ನೆಲೆ ಉಳ್ಳಂತಹ ಕೆಲವು ಯುವಕರು ಡಿ ಗ್ಯಾಂಗ್ ಎಂಬ ಹೆಸರಿನಲ್ಲಿ ಮಾರಕಾಯುಧಗಳಾದ ಪಿಸ್ತೂಲ್ಗಳನ್ನು ಗುರಿ ಅಭ್ಯಾಸ ಮಾಡುವ ರೀತಿಯಲ್ಲಿ ವಿಡಿಯೋ ಚಿತ್ರೀಕರಣಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕೇರಳ ರಾಜ್ಯದ ಪ್ರಮುಖ ದೃಶ್ಯ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿತ್ತು. ಮಿಯಾಪದವು ವಿಟ್ಲ ಠಾಣಾ ಗಡಿ ಭಾಗದಲ್ಲಿ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಕೂಡ ಕಟ್ಟು ನಿಟ್ಟಿನ ನಿಗಾ ಇಡುವಂತೆ ಅಂದಿನ ಪೊಲೀಸ್ ವರಿಷ್ಠಾಧಿಕಾರಿರವರಾದ ಶ್ರೀ ಲಕ್ಷ್ಮಿ ಪ್ರಸಾದ್ ಅಧಿಕಾರಿಗಳಿಗೆ ಸೂಚಿಸಿದ್ದರು.
ಮಾರ್ಚ್ 25 ರಂದು ಮಿಯಪದವು ಡಿ ಸ್ಕಾಡ್ ಗ್ಯಾಂಗ್ ವ್ಯಕ್ತಿಗಳು ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳದ ಹಿದಾಯತ್ ನಗರ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದು ಕ್ಲಬ್ ಮೇಲೆ ಫೈರಿಂಗ್ ನಡೆಸಿ ತಪ್ಪಿಸಿಕೊಂಡಿರುವ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲಾ ಪೊಲೀಸರು ಮಿಯಪದವಿನಲ್ಲಿ ದಾಳಿ ಮಾಡಿದ ಸಂದರ್ಭ ಪೊಲೀಸರ ಮೇಲೆಯೇ ಆರೋಪಿಗಳು ಗುಂಡು ಹಾರಿಸಿ ತಪ್ಪಿಸಿಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಗಡಿ ಭಾಗದ ಕಡೆಗೆ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಂತೆ ಟಿ ಡಿ ನಾಗರಾಜ ಸಿಪಿಐ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳು ಕೋಡಂಗೆ ಎಂಬಲ್ಲಿ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ ದುಷ್ಕರ್ಮಿಗಳ ಪತ್ತೆಗೆ ಕಾಯುತ್ತಿದ್ದರು.
ಮಾರ್ಚ್ 26 ರ ಬೆಳಗಿನ ಜಾವ 4 ಗಂಟೆಗೆ ಕಾರಿನಲ್ಲಿದ್ದ ಸಂಶಯಿತರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದಾಗ ಆರೋಪಿಗಳು ಪೊಲೀಸ್ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸ್ ತಂಡವು 3 ಜನ ಆರೋಪಿಗಳಾದ ಆಸ್ಫಕ, ಶಾಕಿರ್, ಲತೀಫ್ ಎಂಬವರನ್ನು ವಶಕ್ಕೆ ಪಡೆದಿದ್ದರು. ಅವರಿಂದ ಒಂದು ಪಿಸ್ತೂಲ್ ಮತ್ತು ಮದ್ದು ಗುಂಡುಗಳು ಮತ್ತು ಕೊಡಲಿ, ಡ್ರಾಗರ್, ಮಾದಕ ದ್ರವ್ಯಗಳನ್ನು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಆರೋಪಿಗಳಾದ ರಹೀಂ ಮತ್ತು ರಾಕೇಶ್ ಪರಾರಿಯಾಗಿದ್ದರು.
ಎಪ್ರಿಲ್ 5 ರಂದು ಬೆಳಿಗ್ಗೆ 5 ಗಂಟೆಗೆ ಈ ಹಿಂದೆ ತಲೆ ಮರೆಸಿಕೊಂಡಿದ್ದ ಆರೋಪಿಗಳು ಬೆಂಗಳೂರು ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದ್ದು ಪೊಲೀಸ್ ತಂಡವು ಬುಡೊಳಿ ಎಂಬಲ್ಲಿ 4 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ 4 ಪಿಸ್ತೂಲುಗಳು, 1 ಕೋವಿ, 1 ಕೊಡಲಿ, 1 ಡ್ರಾಗೆರ್, 2 ಹ್ಯಾಂಡ್ ಪಂಚ್, ಎಂಡಿಎಂಎ ಡ್ರಗ್, ಎಲ್ಎಸ್ಡಿ ಡ್ರಗ್ ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕಾರ್ಯಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಋಷಿಕೇಶ ಭಗವಾನ್ ಸೋನೆವಾನೆ ಐಪಿಎಸ್ ರವರ ನಿರ್ದೇಶನದಂತೆ, ಬಂಟ್ವಾಳ ಉಪಾಧಿಕ್ಷಕರಾದ ವ್ಯಾಲೆಂಟೈನ್ ಡಿಸೋಜರವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜರವರ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ಮತ್ತು ಎಎಸ್ಐ ಕರುಣಾಕರ, ಸಿಬ್ಬಂದಿಗಳಾದ ಗಿರೀಶ್, ಪ್ರಸನ್ನ, ಪ್ರತಾಪ, ಲೊಕೇಶ್, ವಿನಾಯಕ, ನಝೀರ್, ವಿವೇಕ, ಹೇಮರಾಜ್, ಪ್ರವೀಣರವರಿದ್ದ ತಂಡವು ಕಾರ್ಯಾಚರಣೆಯನ್ನು ಕೈಗೊಂಡಿದೆ.