ಮಂಗಳೂರು,ಏ 06(DaijiworldNews/MS): ಖ್ಯಾತ ಸಾಹಿತಿ, ಬರಹಗಾರ್ತಿ ,ಕನ್ನಡ ಕಥೆಗಾರ್ತಿ ಮುಸ್ಲಿಂ ಸಮುದಾಯದಲ್ಲಿ ಹಿರಿಯ ಲೇಖಕಿಯೆಂದು ಗುರುತಿಸಿಕೊಂಡಬೆಳಪು ಮಿಲಿಟರಿ ಕಾಲೊನಿ ನಿವಾಸಿ ಮಮ್ತಾಜ್ ಬೇಗಂ (73) ಅವರು ಏ. 6ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಗುಜರಾತ್ ನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಪುತ್ರಿ ಜೊತೆ ವಾಸವಿದ್ದ ಅವರು, ತಾವು ರಚಿಸಿದ ಸೂರ್ಯಾಸ್ತ ಪುಸ್ತಕದ ಬಿಡುಗಡೆಗಾಗಿ ಮಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರು ಕೋವಿಡ್ ಪಾಸಿಟಿವ್ ಗೆ ಸಿಲುಕಿ, ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಳೆದ ಐದು ದಶಕಗಳಿಂದ ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದಿದ್ದ ಅವರು ತಪಸ್ವಿ, ಪರದೇಶಿ(1989) ವರ್ತುಲ(1994) ಬಂದಳಿಕೆ(2002) ಜಂಪಿ ಮತ್ತು ಕೆಂಪಿ(ಮಕ್ಕಳ ವೈಜ್ಞಾನಿಕ ಕಾದಂಬರಿ)ಕಾದಂಬರಿ ಸಹಿತ ವಿವಿಧ ಪುಸ್ತಕಗಳನ್ನು ಬರೆದಿದ್ದರು. ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿನ ಸಾಧನೆಗಾಗಿ ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಮಾತೃಶ್ರೀ ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಮೇವುಂಡಿ ಮಲ್ಲಾರಿ ಮಕ್ಕಳ ಕಥಾ ಪುರಸ್ಕಾರ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ, ಹಿರಿಯ ನಾಗರಿಕರ ಸಾಹಿತ್ಯ ಪ್ರಶಸ್ತಿ, ಬಸವ ಸಾಹಿತ್ಯ ಕಲಾವೇದಿಕೆಯ ಬಸವ ಜ್ಯೋತಿ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು.
ಉರ್ದು ಮಾಧ್ಯಮದಲ್ಲಿ ಪ್ರಾರ್ಥಮಿಕ ವಿದ್ಯಾಭ್ಯಾಸ ಮಾಡಿ, ಕನ್ನಡದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರೈಸಿದ ಇವರು ಸಮಾಜಶಾಸ್ತ್ರದಲ್ಲಿ ಬಿ. ಎ. ಪದವಿ ಹಾಗೂ ಬಿ. ಎಡ್. ಪದವೀಧರರಾಗಿದ್ದರು ಕೆಲವು ಕಾಲ ಗ್ರಿಂಡ್ಲೆಸ್ ಬ್ಯಾಂಕ್ ನಲ್ಲಿ ಹಾಗೂ ಯುನೆಸ್ಕೋದಲ್ಲಿ ಸೇವೆಗೈದಿದ್ದಾರೆ. ಇವರ ತಾಯಿ ಅಧ್ಯಾಪಕಿ ಹಾಗೂ ತಂದೆ ಸೈನ್ಯ ದಲ್ಲಿ ಸೇವೆ ಸಲ್ಲಿಸುತ್ತಿದ್ದರು.