ಕುಂದಾಪುರ, ಸೆ 12(SM): ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. ಏಕದಂತ, ಆದಿ ವಂದಿತ, ವಿಘ್ನ ನಿವಾರಕ ಗಣಪನ ಆರಾಧನೆಗಳು ಎಲ್ಲೆಡೆ ಸಾಮಾನ್ಯವಾಗಿದೆ. ವಿವಿಧೆಡೆ ವಿವಿಧ ರೀತಿಯಲ್ಲಿ ಗಣೇಶನ ಆರಾಧನೆ ನಡೆಯುತ್ತದೆ. ಕರಾವಳಿಯಲ್ಲಂತೂ ಗಣೇಶ ಚತುರ್ಥಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಉಡುಪಿ ಜಿಲ್ಲೆಯಲ್ಲಿ ಗುಹಾಂತರ ದೇವಾಲಯಗಳಿಗೆ ಕೊರತೆ ಇಲ್ಲ. ಹಲವಾರು ಗುಹಾಂತರ ದೇವಾಲಯಗಳು ಭಿನ್ನ, ವಿಭಿನ್ನ ವಿಶೇಷತೆಗಳಿಂದ ಗಮನ ಸೆಳೆಯುತ್ತದೆ. ಗುಹಾಂತರ ದೇವಳ ಪೈಕಿ ಒಂದಿಷ್ಟು ವಿಶೇಷತೆಗಳನ್ನು ಒಳಗೊಂಡ ಒಂದು ಗುಹಾಂರ್ತಲಯ ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿದೆ. ಶಿಲೆಯಿಂದ ಆವೃತ್ತವಾದ ಗುಹೆಯೊಳಗೆ ಉದ್ಬವ ಗಣಪತಿ ಶಿಲಾಮಯ ಗರ್ಭಗುಡಿಯೊಳಗೆ ನೆಲೆನಿಂತಿದ್ದಾನೆ.
ವಿಸ್ತಾರದವಾದ ಶಿಲಾಬಂಡೆಗಳ ದಿಬ್ಬ. ಅದಕ್ಕೆ ಹೋರಾವರಣದಲ್ಲಿ ಆವರಿಸಿದ ವೃಕ್ಷಸಂದೋಹ. ನೈಸರ್ಗಿಕವಾಗಿ ರಚನೆಗೊಂಡ ಭಾರಿ ಬಂಡೆಗಳ ನಡುವೆ ಇರುವ ಸೀಳಿನಲ್ಲಿ ಒಬ್ಬರು ತೂರಿಕೊಂಡು ಒಳ ಹೋಗಬಹುದಾದ ರಂದ್ರವಿದೆ. ಗುಹೆಯ ಒಳಗೆ ಅದ್ಬುತ ಎನಿಸಬಹುದಾದ ಶಿಲಾಮಯ ಗರ್ಭಗುಡಿ. ಇಂದಿನ ವೈಜ್ಞಾನಿಕ ಯಾಂತ್ರೀಕೃತ ದಿನದಲ್ಲಿಯೂ ಸವಾಲು ಎನಿಸಬಹುದಾದ ಬೆರಗು. ಅತೀ ಇಕ್ಕಟ್ಟಾದ ಸೀಳು ದಾರಿಯಲ್ಲಿ ಒಬ್ಬ ಸಾಧಾರಣ ಮೈಕಟ್ಟಿನ ವ್ಯಕ್ತಿಯ ಶರೀರ ಒಳಹೋಗುವುದೆ ಕಷ್ಟ ಅಂತಿರುವಾಗ ಒಳಗೆ ಶಿಲೆಗಳನ್ನು ಕೊಂಡೊಯ್ದು ಹೇಗೆ ಶಿಲಾಮಯ ಗರ್ಭಗುಡಿ ನಿರ್ಮಾಣ ಮಾಡಲಾಗಿದೆ ಎನ್ನುವುದೇ ಅಚ್ಚರಿ. ಚೌಕಾಕಾರದ ಗರ್ಭಗುಡಿ, ಮೇಲೆ ಸಾಕಷ್ಟು ಅಗಲದ ಶಿಲೆಯ ಕಲಾತ್ಮಕವಾದ ಹಲಗೆಗಳಿಂದ ಸೂರು ನಿರ್ಮಾಣ ಮಾಡಲಾಗಿದೆ. ಅತ್ಯಂತ ನಾಜೂಕಾದ ಕೆತ್ತನೆಯ ಕೆಲಸ ಎಂತವರನ್ನು ಚಕಿತರನ್ನಾಗಿ ಮಾಡುತ್ತದೆ.
ಈ ಕಲ್ಲು ಗಣಪತಿ ಗುಹಾಂತರಾಲಯ ಶತಶತಮಾನಗಳ ಗತಪೂರ್ವದ್ದು ಎನ್ನಲಾಗಿದೆ. ಬಾರ್ಕೂರು ಅರಸರ ಕಾಲದಲ್ಲಿ ನಿರ್ಮಾಣವಾಗಿತ್ತು ಎಂಬುವುದು ಇಲ್ಲಿನ ಐತಿಹ್ಯ. ಕಲ್ಲುಗಳಿಂದಲೇ ಆವೃತ್ತವಾದ ಪ್ರದೇಶ, ಶಿಲೆಯಿಂದ ನಿರ್ಮಿತವಾದ ಗರ್ಭಗುಡಿ, ಅಪರೂಪದ ಗುಹೆ ಇತ್ಯಾದಿ ಕಾರಣಗಳಿಂದ ಜನರೂಢಿಯಾಗಿ ಕಲ್ಲು ಗಣಪತಿ ಎಂದೇ ಸುಮುಖ ಇಲ್ಲಿ ಬಹುಪ್ರಖ್ಯಾತಗೊಂಡಿದ್ದಾನೆ. ಈ ಕ್ಷೇತ್ರದ ಬಗ್ಗೆ ಯಾವುದೇ ಲಿಖಿತ ದಾಖಲೆಗಳು ಲಭ್ಯವಿಲ್ಲದಿದ್ದರೂ ಗುಹೆಯೊಳಗೆ ಕೆತ್ತಲಾದ ಶಿಲೆಯ ಕೆಲಸದಲ್ಲಿ ಶಿಲ್ಪಿಯ ಪ್ರತಿಭಾಸಂಪತ್ತು ಅಡಗಿದೆ.
ಸುಮಾರು ೮೦ ಅಡಿಗಳಿಗೂ ಎತ್ತರದ ಬಂಡೆಗಳ ದಿಬ್ಬದ ಪೂರ್ವ ಭಾಗಕ್ಕೆ ಬಂದರೆ ಸೂರ್ಯರಶ್ಮಿ ಪ್ರವೇಶ ಮಾಡುವಂತಹ ಎರಡು ಬಂಡೆಗಳ ನಡುವೆ ಸೀಳು ಬಿಟ್ಟಂತೆ ಕಿರಿದಾದ ಮಾರ್ಗವಿದೆ. ಈ ಸೀಳು ಮಾರ್ಗಕ್ಕೆ ಕಲ್ಲು ಹಾಸುಗಳನ್ನು ಹಾಸಲಾಗಿದ್ದು, ಸುಮಾರು 80 ಅಡಿಗಳಷ್ಟು ಇಕ್ಕಟ್ಟಿನ ಮಾರ್ಗದಲ್ಲಿ ಪ್ರಯಾಸಪಟ್ಟು ಕ್ರಮಿಸಿದರೆ ಶಿಲೆಯ ಗರ್ಭಗುಡಿ ಎದುರಾಗುತ್ತದೆ. ಸರಳ, ಸುಂದರ ಶಿಲಾಮಯ ಗರ್ಭಗುಡಿಯ ಒಳಗೆ ಇದ್ದಾನೆ ಉದ್ಭವ ಗಣನಾಥ.
ಪಡುಮುಂಡುವಿನ ಕಲ್ಲು ಗಣಪತಿ ಆಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ನಂಬಿದವರ ಇಷ್ಟಾರ್ಥವನ್ನು ಈ ಉದ್ಬವ ಗಣಪ ಈಡೇರಿಸುತ್ತಾನೆ ಎನ್ನುವ ನಂಬಿಕೆ ಅಚಲವಾಗಿದೆ. ಶಿರಿಯಾರ ಗ್ರಾಮದ ಅಧಿದೇವತೆಯಾಗಿರುವ ಕಲ್ಲು ಗಣಪತಿ, ರಂಗಪೂಜೆ ಪ್ರಿಯ. ಗಣೇಶ ಚತುರ್ಥಿ, ಮಹಾಚೌತಿ, ಸಂಕಷ್ಟ ಚತುರ್ಥಿ,ಸಂಕ್ರಮಣ ಮೊದಲಾದ ಶುಭವಸರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನೀತರಾಗುತ್ತಾರೆ. ಇದೀಗ ಗಣೇಶ ಚತುರ್ಥಿ ಸಂಭ್ರಮ ನಡೆಯುತ್ತಿದ್ದು ಭಕ್ತಸಾಗರ ಹರಿದು ಬರುತ್ತಿದೆ.