ಮಂಗಳೂರು, ಎ.06 (DaijiworldNews/MB) : ಕುಂಪಲಾದಲ್ಲಿನ ಅನಾಥಾಶ್ರಮವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 52 ವರ್ಷದ ವಾರ್ಡನ್ನನ್ನು 14 ವರ್ಷದ ಅಪ್ರಾಪ್ತ ಮಕ್ಕಳಿಗೆ ಮೇಲೆ ಲೈಂಗಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದಲ್ಲಿ ಏಪ್ರಿಲ್ 6 ರ ಮಂಗಳವಾರ ಬಂಧಿಸಲಾಗಿದೆ. ಬಂಧಿತನನ್ನು ಕೊಣಾಜೆ ಮೂಲದ 55 ವರ್ಷದ ಆಯುಬ್ ಎಂದು ಗುರುತಿಸಲಾಗಿದೆ.


ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ''ಮಾರ್ಚ್ 28 ರಂದು ಪೊಲೀಸ್ ಇಲಾಖೆ, ಕೆ.ಎಸ್. ಹೆಗ್ಡೆ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಕಲ್ಯಾಣ ಅಧಿಕಾರಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತ ವ್ಯಾಪ್ತಿಯ ಮಕ್ಕಳ ಆರೈಕೆ ಕೇಂದ್ರ, ಅನಾಥಾಶ್ರಮಗಳ 480 ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗಿತ್ತು. ಈ ಕಾರ್ಯಕ್ರಮವು ಗುಡ್ ಟಚ್ ಆಂಡ್ ಬ್ಯಾಡ್ ಟಚ್ ಬಗ್ಗೆ ಅರಿವು ಮೂಡಿಸಲು, ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಲು, ಮಗುವನ್ನು ಯಾವುದಾದರೂ ರೀತಿಯಲ್ಲಿ ದುರುಪಯೋಗಕ್ಕೆ ಒಳಪಡಿಸಲಾಗಿದೆಯೇ ಎಂದು ತಿಳಿಯಲು ಹಾಗೂ ಮಗುವಿನ ಜೊತೆ ಸಮಾಲೋಚನೆ ನಡೆಸಲು ಆಯೋಜಿಸಲಾಗಿತ್ತು''
''ಈ ಸಂದರ್ಭದಲ್ಲಿ ಕುಂಪಾಲದ ನೂರಾನಿ ಯತಿಮ್ ಖಾನಾ ದಾರುಲ್ ಮಸಕೀನ್ನಲ್ಲಿ 14 ವರ್ಷದ ಬಾಲಕ ಲೈಂಗಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದಾನೆ ಎಂದು ತಿಳಿದು ಬಂದಿದೆ. ಮೊದಲಿಗೆ ಬಾಲಕ ಸಮಸ್ಯೆಯ ಬಗ್ಗೆ ತಿಳಿಸಿದ. ಬಳಿಕ ಎರಡು ಸುತ್ತಿನ ಸಮಾಲೋಚನೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಆರು ಸಂಸ್ಥೆಗಳಲ್ಲಿ ಇಂತಹ 20 ನಿದರ್ಶನಗಳು ಬೆಳಕಿಗೆ ಬಂದವು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ'' ಎಂದು ತಿಳಿಸಿದರು.
ಕುಂಪಲದ ಈ ಸಂಸ್ಥೆಯಲ್ಲೇ 4 ಪ್ರಕರಣಗಳು ದೊರೆತಿದೆ. ಮಕ್ಕಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
"ಗುಡ್ ಟಚ್ ಮತ್ತು ಬ್ಯಾಡ್ ಟಚ್ಗಳ ಮೂಲಕ ಮಕ್ಕಳಿಗೆ ಅರಿವು ಮೂಡಿಸುವ ಹಾಗೂ ಲೈಂಗಿಕ ದೌರ್ಜನ್ಯದ ಕುರಿತು ಎಚ್ಚರಿಕೆ ನೀಡುವ ಕಾರ್ಯಕ್ರಮ" ಎಂದು ನಾವು ಮಕ್ಕಳ ಆರೈಕೆದಾರರಿಗೆ ತಿಳಿಸದೆ ಸಂಪೂರ್ಣವಾಗಿ ಗೌಪ್ಯವಾಗಿಟ್ಟು ಜಾಗೃತಿ ಕಾರ್ಯಕ್ರಮ ನಡೆಸಿದ್ದರ ಪರಿಣಾಮ ಸತ್ಯಾಂಶ ಹೊರಬಿದ್ದಿದೆ. ಮಕ್ಕಳ ಆರೈಕೆ ಕೇಂದ್ರದಲ್ಲಿ ಮಕ್ಕಳು ಏನನ್ನೂ ಹಂಚಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಟಿಎಂಎ ಪೈ ಹಾಲ್ನಲ್ಲಿ ಕಾರ್ಯಕ್ರಮ ನಡೆಸಲಾಯಿತು ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.