ಕಾಸರಗೋಡು, ಏ 7 (DaijiworldNews/MS): ಚುನಾವಣೆ ಮುಗಿದ ಬಳಿಕ ಕಣ್ಣೂರಿನಲ್ಲಿ ನಡೆದ ಘರ್ಷಣೆಯಲ್ಲಿ ಯೂತ್ ಲೀಗ್ ಕಾರ್ಯಕರ್ತನೋರ್ವ ಕೊಲೆಗೀಡಾದ ಘಟನೆ ನಡೆದಿದೆ . ಕೊಲೆಗೀಡಾದವನನ್ನು ಕೂತು ಪರಂಬ ಪುಳ್ಳಕರೆಯ ಮನ್ಸೂರ್ ( 22) ಎಂದು ಗುರುತಿಸಲಾಗಿದೆ . ಸಹೋದರ ಮುಹಸಿನ್ (27) ಗಂಭೀರ ಗಾಯಗೊಂಡಿದ್ದಾನೆ .

ಮೃತ ಮನ್ಸೂರ್
ಏ. ೬ ರ ಮಂಗಳವಾರ ರಾತ್ರಿ ೮. ೩೦ ರ ಸುಮಾರಿಗೆ ಮನೆಗೆ ನುಗ್ಗಿದ ತಂಡವೊಂದು ಮನೆಗೆ ಕಚ್ಚಾ ಬಾಂಬ್ ಎಸೆದಿದ್ದು , ಬಳಿಕ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಗಂಭೀರ ಗಾಯಗೊಂಡ ಮನ್ಸೂರ್ ಹಾಗೂ ಮುಹಸಿನ್’ ರನ್ನು ಕೋಝಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಿದರೂ ಬುಧವಾರ ಮುಂಜಾನೆ ಮನ್ಸೂರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಂಗಳವಾರ ಮಧ್ಯಾಹ್ನ ಮತಗಟ್ಟೆ ಬಳಿ ಯೂತ್ ಲೀಗ್ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು . ಮನ್ಸೂರ್ ನ ಸಹೋದರ ಮುಹಸಿನ್ ಮತಗಟ್ಟೆ ಯು.ಡಿ. ಎಫ್ ಏಜಂಟ್ ಆಗಿದ್ದನು . ಮತದಾನ ಮುಗಿದು ಮನೆಗೆ ತೆರಳುತ್ತಿದ್ದಾಗ ಮುಹಸಿನ್ ಗೆ ತಂಡವು ಬೆದರಿಕೆ ಒಡ್ಡಿತ್ತು ಎನ್ನಲಾಗಿದೆ.
ರಾತ್ರಿ ಮನೆಗೆ ನುಗ್ಗಿದ ತಂಡವು ಇಬ್ಬರ ಮೇಲೆ ಏಕಾ ಏಕಿ ದಾಳಿ ನಡೆಸಿದ್ದು , ಬಳಿಕ ತಂಡವು ಪರಾರಿಯಾಗಿದೆ.
ಕೃತ್ಯಕ್ಕೆ ಸಂಬಂಧಪಟ್ಟಂತೆ ಓರ್ವ ಸಿಪಿಎಂ ಕಾರ್ಯಕರ್ತನನ್ನು ಕೂತು ಪರಂಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ . ಕೃತ್ಯವನ್ನು ಖಂಡಿಸಿ ಕೂತು ಪರಂಬ ವಿಧಾನಸ ಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಹರತಾಳಕ್ಕೆ ಯು ಡಿ ಎಫ್ ಕರೆ ನೀಡಿದೆ