ಮಂಗಳೂರು, ಏ 7(DaijiworldNews/MS): ಆರನೇ ವೇತನ ಆಯೋಗದ ಶಿಫಾರಸು ಅನ್ವಯಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದು, ದ.ಕ.ಜಿಲ್ಲೆಯಲ್ಲೂ ಕೆಎಸ್ಆರ್ಟಿಸಿ, ಸರ್ಕಾರಿ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ.

ನಗರದ ಬಸ್ ನಿಲ್ದಾಣದಲ್ಲಿ ಬಸ್ ಗಳು ಇಲ್ಲದೆ ಖಾಲಿ ಖಾಲಿಯಾಗಿದ್ದು, ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಬಸ್ ಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರು ಕಾದು ಕುಳಿತಿರುವ ದೃಶ್ಯ ಸಾಮಾನ್ಯವಾಗಿದೆ. ಸರ್ಕಾರಿ ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತವಾಗಿದ್ದು ಹೆಚ್ಚಿನ ಪ್ರಯಾಣಿಕರು ಖಾಸಗಿ ಬಸ್ ಗಳ ಮೊರೆ ಹೋಗುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಕಳೆದ ಡಿಸೆಂಬರ್ನಲ್ಲಿಯೂ ಸಾರಿಗೆ ನೌಕರರು ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದ್ದರು. ಮೂರು ತಿಂಗಳ ಅಂತರದಲ್ಲಿ ಮತ್ತೆ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ಸದ್ಯಕ್ಕೆ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.