ಮೂಡುಬಿದಿರೆ, ಎ.07 (DaijiworldNews/MB) : ತುಳುನಾಡಿನ ಇತಿಹಾಸ ಪ್ರಸಿದ್ದ ಮೃಣ್ಮಯ ಮೂರ್ತಿ ಮಾತೆ ರಾಜರಾಜೇಶ್ವರಿಯ ಸನ್ನಿಧಿ ಪೊಳಲಿಯ ಜಾತ್ರೆ ವಿಶಿಷ್ಠವಾದದು. ಒಂದು ತಿಂಗಳ ಈ ಪರಂಪರೆಯ ಜಾತ್ರೆಯಲ್ಲಿ 'ಪುರಲ್ದ ಚೆಂಡ್' ಮುಖ್ಯ ಆಕರ್ಷಣೆಯಾಗಿದೆ. ಭಕ್ತರು ಎಲ್ಲೆಡೆಯಿಂದ ಈ ಜಾತ್ರೆಗೆ ಬರುವುದು ಚೆಂಡಿನಾಟದ ಹಿನ್ನೆಲೆಯಿಂದಾಗಿ. ( ಈ ಬಾರಿ ಎ6ರಿಂದ 10) ಅದರ ಆಚರಣೆ ಎಲ್ಲವೂ ಗಮನಾರ್ಹ. ಮೂಡುಬಿದಿರೆಯ ಪುತ್ತಿಗೆಯ ಕ್ಷೇತ್ರ ಈ ಪೊಳಲಿ ಜಾತ್ರೆಗೆ ದಿನ ನಿಗದಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅದೇ ರೀತಿ ಪ್ರಸಿದ್ಧ ಪೊಳಲಿ ಚೆಂಡಿಗೂ ಮೂಡುಬಿದಿರೆಗೂ ಗಮನ ಸೆಳೆಯುವ ಸಂಬಂಧವೆಂದರೆ ಈ ಚೆಂಡು ಸಿದ್ದವಾಗುವುದು ಮೂಡುಬಿದಿರೆಯಲ್ಲೇ.


ಪೊಳಲಿ ಚೆಂಡಿನ ಸಿದ್ಧತೆಯನ್ನು ಶ್ರದ್ಧಾ ಭಕ್ತಿಯಿಂದ ಕಳೆದ 15 ವರ್ಷಗಳಿಂದ ನಿರ್ಮಿಸುತ್ತಿರುವವರು ಇಲ್ಲಿನ ಗಾಂಧಿನಗರದ ಎಂ.ಪದ್ಮನಾಭ ಸಮಗಾರರವರು. ತಂದೆ ಕೃಷ್ಣ ಸಮಗಾರರರಿಂದ ಬಳುವಳಿಯಾಗಿ ಬಂದ ವೃತ್ತಿ ಕೌಶಲದ ಜತೆಗೆ ಚೆಂಡು ತಯಾರಿಕೆಯನ್ನೂ ಪದ್ಮನಾಭ ಮುಂದುವರಿಸಿಕೊಂಡು ಬಂದಿದ್ದಾರೆ. ಎತ್ತಿನ ದಪ್ಪ ಚರ್ಮವನ್ನು ಬೆಂಗಳೂರಿನಲ್ಲಿ ಹುಡುಕಿ, ತಮ್ಮ ಮನೆಗೆ ತಂದು ಬೇಕಾದ ರೀತಿಯಲ್ಲಿ ಹದ ಮಾಡಿ ತೆಂಗಿನ ನಾರನ್ನು ಚೆಂಡಿನೊಳಗೆ ತುಂಬಿ ಹೊಲಿಯುವ ಚಾಕಚಕ್ಯತೆ ಇವರಿಗಿದೆ.
ಮೊದಲು ವೃತ್ತಕಾರದ ಚರ್ಮವನ್ನು ಕತ್ತರಿಸಿ ಸಣ್ಣ ಒನಕೆಯಿಂದ ಚರ್ಮವನ್ನು ಗುದ್ದಿ ಹದ ಮಾಡಿ ಬಳಿಕ ಅರ್ಧ ಗೋಲಾಕಾರವಾಗಿ ರೂಪಿಸಲಾಗುತ್ತದೆ. ಹೀಗೆ ಎರಡು ಅರ್ಧ ಗೋಲಾಕಾರದ ಚರ್ಮದ ಬಟ್ಟಲನ್ನು ಸಿದ್ದಪಡಿಸಿದ ಬಳಿಕ ಎರಡನ್ನೂ ಚರ್ಮದ ದಾರದಿಂದಲೇ ಹೊಲಿಯಲಾಗುತ್ತದೆ. ಬಳಿಕ ತೆಂಗಿನ ನಾರನ್ನು ನೀರು ಹನಿಸಿ ಒದ್ದೆ ಮಾಡಿ ಈ ಗೋಲದೊಳಗೆ ತುರುಕಿ ಮತ್ತೆ ಒತ್ತಡ ಹಾಕಿ ಗುದ್ದಲಾಗುತ್ತದೆ. ಹೀಗೆ ಗುದ್ದಿ ಗಟ್ಟಿಗೊಳಿಸುವಾಗ ಗೋಲದೊಳಗೆ ಖಾಲಿ ಜಾಗ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಚಪ್ಪಟ್ಟೆಯಾದ ಚೆಂಡು ತಯಾರಾಗುತ್ತದೆ. ಇದನ್ನು ಸಂಬಂಧಪಟ್ಟವರು ಕೊಂಡೊಯ್ದ ಬಳಿಕ ಎಣ್ಣೆ ಕೊಡುತ್ತಾರೆ. ಆಗ ಅದು ಪೂರ್ತಿಯಾಗಿ ಚೆಂಡಿನ ಆಕಾರಕ್ಕೆ ಬರುತ್ತದೆ. ಹೀಗೆ ಜಿಲ್ಲೆಯ ಹತ್ತು ಹಲವು ಧಾರ್ಮಿಕ ಕ್ಷೇತ್ರಗಳಿಗೆ ಚೆಂಡು ತಯಾರಿಸಿಕೊಡುವ ಕಾರ್ಯವನ್ನು ಪದ್ಮನಾಭ ಅವರು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ.
ಮೂಡುಬಿದರೆಯ ಹಳೆ ಠಾಣೆ ಬಳಿ ಕಲ್ಸಂಕದಲ್ಲಿ ಚರ್ಮದ ಚಪ್ಪಲಿ, ಶೂ ಬ್ಯಾಗ್ ತಯಾರಿ ಮಾಡುವ ಪದ್ಮನಾಭ ಅವರು ಹದಿನೈದು ವರ್ಷಗಳಿಂದ ಇಲ್ಲಿನ ಸೊಸೈಟಿ ಬ್ಯಾಂಕಿನ ನಿರ್ದೇಶಕರಾಗಿಯೂ ಇದ್ದಾರೆ.
ಚೆಂಡಿಗೂ '18'ರ ನಂಟು!
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಎಂದರೆ ಇಲ್ಲಿ 18ರ ನಂಟಿದೆ. 18 ಬಸದಿಗಳು, ಕೆರೆಗಳು, ದೇವಾಲಯಗಳು, ಆಳ್ವಾಸ್ನಂತಹ ಹೆಸರಾಂತ ಶಿಕ್ಷಣ ಪ್ರತಿಷ್ಠಾನದ ಖ್ಯಾತಿವೆತ್ತ ಒಂದೇ ದೊಡ್ಡ ಆವರಣದಲ್ಲಿ 18 ಶಿಕ್ಷಣ ಸಂಸ್ಥೆಗಳು, ಅಲ್ಲಿ 18 ಸಾವಿರ ವಿದ್ಯಾರ್ಥಿಗಳು ಹೀಗೆ 18ರ ನಂಟು ಇಲ್ಲಿದೆ. ವಿಶೇಷವೆಂದರೆ ಪದ್ಮನಾಭರೂ ಪ್ರಸಿದ್ಧ ಪೊಳಲಿ ಸೇರಿದಂತೆ ಜಿಲ್ಲೆಯ ಸುಮಾರು 18 ಕ್ಷೇತ್ರಗಳಿಗೆ ಅಲ್ಲಿನ ವಾರ್ಷಿಕ ಜಾತ್ರೆಗಳಿಗೆ ಚರ್ಮದ ಚೆಂಡು ಒದಗಿಸುತ್ತಾ ಬಂದಿರುವುದು! ಅದರಲ್ಲಿ ಪೊಳಲಿ ಚೆಂಡು ದೊಡ್ಡ ಗಾತ್ರದ್ದಾಗಿದೆ.
ವಾಮಂಜೂರಿನ ಅಮೃತೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ, ಬೆಳುವಾಯಿ ನಡ್ಯೋಡಿಗೆ ಮತ್ತು ಸಾಣೂರು. ಕೋಟೆಬಾಗಿಲು, ಮೂಡುಬಿದರೆಯ ಆದಿಶಕ್ತಿ ಮಹಾದೇವಿ ಮತ್ತು ಮಹಾಕಾಳಿ ದೇವಸ್ಥಾನಗಳು, ಮಲ್ಲೂರು, ಅಮ್ಟಾಡಿ, ಇರುವೈಲು, ಮುಚ್ಚೂರು, ಮಾರ್ನಾಡು, ಅಳಿಯೂರು, ಅಶ್ವತ್ಥಪುರ, ಪಾಲಡ್ಕ ಹೀಗೆ ವಿವಿಧೆಡೆ ಹಲವು ಗಾತ್ರದ ಚೆಂಡುಗಳನ್ನು ಒದಗಿಸುವ ಪದ್ಮನಾಭರಿಗೆ ಜನವರಿಯಿಂದ ಮೇವರೆಗೆ ಚೆಂಡಿನ ಸೀಸನ್. ಅದೊಂದು ವ್ಯಾಪಾರ ಎನ್ನುವುದಕ್ಕಿಂತ ಧಾರ್ಮಿಕ ಪರಂಪರೆಯ ಸೇವೆಯ ಅವಕಾಶ ಎಂದು ಪದ್ಮನಾಭ ಹೇಳುತ್ತಾರೆ.
ಪರಂಪರೆಯ ಬೆಸುಗೆ ಇರುವ ಚೆಂಡುಗಳನ್ನು ತಯಾರಿಸುವ ಅವಕಾಶ ಪಡೆದಿರುವುದು ನನ್ನ ಭಾಗ್ಯ ಎನ್ನುವ ಪದ್ಮನಾಭರ ಈ ಕೆಲಸದ ಹಿಂದೆ ಪತ್ನಿ ಕಮಲ, ಪುತ್ರರಾದ ರಾಜೇಶ್, ರಾಕೇಶ್ ಪುತ್ರಿಯರಾದ ಜಯಶ್ರೀ, ಉಷಾ ಅವರ ಸಹಕಾರವೂ ಇದೆ ಎಂದು ಕೂಡಾ ಅವರು ಹೇಳುತ್ತಾರೆ.