ಮಂಗಳೂರು, ಎ.07 (DaijiworldNews/MB) : ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದರಿಂದ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ತುಳು ರಾಜ್ಯವನ್ನು ರಚಿಸುವಂತೆ ಒತ್ತಾಯಿಸಿ ತುಳು ಸಂಘಟನೆ ಟ್ವಿಟರ್ನಲ್ಲಿ ಅಭಿಯಾನವನ್ನು ಪ್ರಾರಂಭಿಸಿದೆ.

ಏಪ್ರಿಲ್ 4 ರಂದು ನಡೆಯುವ 'ತುಳು ರಾಜ್ಯ' ಟ್ವೀಟ್ ಅಭಿಯಾನದಲ್ಲಿ ಭಾಗವಹಿಸಲು ಜಗತ್ತಿನಾದ್ಯಂತ ವಾಸಿಸುತ್ತಿರುವ ಎಲ್ಲಾ ತುಳುವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವನ್ನು ಕಳುಹಿಸಲಾಗಿದೆ. ಈ ಅಭಿಯಾನದ ಪರವಾಗಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ. ಈ ಮನವಿಯನ್ನು ಪರಿಶೀಲಿಸುವಂತೆ ಕರ್ನಾಟಕದ ಸಿಎಂ, ರಾಜ್ಯ ಗೃಹ ಸಚಿವ, ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಒಟ್ಟು 84,000 ಜನರು ಈ ಪ್ರತ್ಯೇಕ ತುಳು ರಾಜ್ಯ ಆಗ್ರಹವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ಏಪ್ರಿಲ್ 4 ರ ಅತಿ ಹೆಚ್ಚು ಟ್ವೀಟ್ ರೇಟಿಂಗ್ನಲ್ಲಿ ತುಳು ರಾಜ್ಯ ಟ್ವೀಟ್ ಎರಡನೇ ಸ್ಥಾನ ಗಳಿಸಿದೆ. ಆದರೆ, ತುಳವರ ಈ ಮನವಿಯನ್ನು ಕನ್ನಡಿಗರು ವಿರೋಧಿಸಿದ್ದಾರೆ.
ಅಭಿಯಾನದಲ್ಲಿ ಹೆಚ್ಚಿನ ತುಳುವರು ಟ್ವೀಟ್ ಮಾಡಿದ್ದಾರೆ, "ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆ ಮಾಡುವ ತುಳುವರ ಬೇಡಿಕೆಯನ್ನು ಸರ್ಕಾರ ಪರಿಗಣಿಸಿಲ್ಲ, ಆದರೂ ಐದು ದಶಕಗಳಿಂದ ತುಳುವರು ಈ ಒತ್ತಾಯ ಮಾಡುತ್ತಿದ್ದಾರೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆ ಮಾಡುವ ಬಗ್ಗೆ ವಿಶ್ವ ತುಳು ಸಮಾವೇಶದಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬೇಡಿಕೆಯನ್ನು ಈಡೇರಿಸಲಿಲ್ಲ. ತುಳುವಿಗೆ ಅದರ ಗೌರವವನ್ನು ನೀಡುವಂತೆ ನಾವು ಎಷ್ಟು ಬೇಡಿಕೊಳ್ಳಬೇಕು?. ಕರ್ನಾಟಕ ರಾಜ್ಯ ರಚನೆಯಾದಾಗಲೇ ರಾಜ್ಯ ಸರ್ಕಾರವು ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಏಕೆ ಪರಿಗಣಿಸಲಿಲ್ಲ? ತುಳು ನಮ್ಮ ಸಹೋದರ ಭಾಷೆ ಎಂದು ಹೇಳುವ ಮೂಲಕ ನ್ಯಾಯ ನೀಡಲು ಸಾಧ್ಯವಿಲ್ಲ. ಆದ್ದರಿಂದ ನೀವು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ತುಳು ರಾಜ್ಯವನ್ನು ಘೋಷಿಸಿ" ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳ, ಅಡ್ಯಾರ್ ಮತ್ತು ದುಬೈನಲ್ಲಿ ನಡೆದ ವಿಶ್ವ ತುಳು ಸಮಾವೇಶಗಳಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಬೆಲೆ ನೀಡುತ್ತಿಲ್ಲ ಎಂದು ಟ್ವೀಟ್ ಅಭಿಯಾನವು ಎತ್ತಿ ತೋರಿಸಿದೆ. ತುಳುನಾಡಿನ ಎಲ್ಲ ಶಾಸಕರು ಎಂಟನೇ ಪರಿಚ್ಛೇಧದಲ್ಲಿ ತುಳು ಭಾಷೆಯನ್ನು ಸೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ತುಳು ರಾಜ್ಯವನ್ನು ರಚಿಸಬೇಕಾಗಿದೆ ಎಂದು ಈ ಅಭಿಯಾನದ ಮೂಲಕ ಒತ್ತಾಯಿಸಲಾಗಿದೆ.
ತುಳು ರಾಜ್ಯ ಟ್ವೀಟ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. #Tulunadu, #Stopkannadaimposition and #savetulufirst ಎಂಬ ಹ್ಯಾಷ್ಟಾಗ್ ಮೂಲಕ ಒಂದೇ ದಿನದಲ್ಲಿ ಕ್ರಮವಾಗಿ 35,000, 27,000 ಮತ್ತು 22,000 ಟ್ವೀಟ್ಗಳನ್ನು ಮಾಡಲಾಗಿದೆ. ಭಾನುವಾರದಂದು ದೇಶದಲ್ಲೇ ಈ ಟ್ವೀಟ್ ಟ್ರೆಂಡಿಂಗ್ನಲ್ಲಿ ಎರಡನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರ ಏಕೀಕರಣ ಯುವ ಸಮಿತಿಯೂ ಕೂಡಾ ಈ ಬೇಡಿಕೆ ಪರವಾಗಿ ಟ್ವೀಟ್ ಮಾಡಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಯುವ ತುಳುನಾಡಿನ ಗೌರವ ಸಲಹೆಗಾರರಾದ ದಿಲ್ರಾಜ್ ಆಳ್ವಾ, "ಪ್ರತ್ಯೇಕ ತುಳು ರಾಜ್ಯಕ್ಕಾಗಿ ಅಭಿಯಾನವು ಟ್ವಿಟ್ಟರ್ನಲ್ಲಿ ಆರಂಭವಾಗುತ್ತಿದ್ದಂತೆ, ಅನೇಕ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ಕರ್ನಾಟಕವನ್ನು ಮುರಿಯಬೇಡಿ, ಆದರೆ ತುಳು ಭಾಷೆಯ ಬೇಡಿಕೆಯನ್ನು ಪ್ರಬಲವಾಗಿ ರಾಜ್ಯ ಸರ್ಕಾರದ ಮುಂದಿಡಿ ಎಂದು ಸಲಹೆ ನೀಡಿದ್ದಾರೆ. ಕೆಲವು ನೆಟ್ಟಿಗರು ತುಳು ಹಾಗೂ ಕನ್ನಡ ಭಾಷೆಗಳ ಪರ ವಿರುದ್ದವಾಗಿ ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ, ತುಳು ರಾಜ್ಯದ ಟ್ವಿಟರ್ ಅಭಿಯಾನವು ಭಾರಿ ಚರ್ಚೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.