ಕಾಸರಗೋಡು, ಎ.07 (DaijiworldNews/MB) : ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಅವರು ಹೇಳಿಕೆ ನೀಡಿದ್ದು ಮತ ಎಣಿಕೆಗೂ ಮುನ್ನವೇ ಕಾಂಗ್ರೆಸ್ ಸೋಲೊಪ್ಪಿಕೊಂಡಿತಾ ಎಂಬ ಅನುಮಾನ ವ್ಯಕ್ತವಾಗಿದೆ.

ಪ್ರತಿಷ್ಠೆಯ ಕಣವಾಗಿವಾಗಿರುವ ಮಂಜೇಶ್ವರದಲ್ಲಿ ಯುಡಿಎಫ್ ಗೆಲುವಿನ ಬಗ್ಗೆ ರಾಜ್ಯಾಧ್ಯಕ್ಷರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಮಂಜೇಶ್ವರದಲ್ಲಿ ಬಿಜೆಪಿ ಗೆಲ್ಲಲ್ಲಿದ್ದು ಅದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇರಾ ಹೊಣೆ ಎಂದು ಹೇಳಿದ್ದಾರೆ.
ಕೇರಳದ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ''ಈ ಹಿಂದೆ ಚುನಾವಣೆಯಲ್ಲಿ ಸಿಪಿಎಂ ಉತ್ಸಾಹದಿಂದ ಭಾಗಿಯಾಗಿತ್ತು. ಆದರೆ ಈ ಬಾರಿ ನಿಷ್ಕ್ರೀಯವಾಗಿದೆ. ಸಿಪಿಎಂ ಪಕ್ಷದ ನಿಷ್ಕ್ರೀಯತೆ ಬಿಜೆಪಿ ಗೆಲುವಿಗೆ ಮುಖ್ಯ ಕಾರಣವಾಗಲಿದೆ. ಬಿಜೆಪಿ ಜೊತೆ ಸಿಪಿಎಂ ಕೈ ಜೋಡಿಸಿರುವ ಸಾಧ್ಯತೆಯಿದೆ'' ಎಂದು ಹೇಳಿಕೊಂಡಿದ್ದಾರೆ.
''ಬಿಜೆಪಿ-ಎಲ್ಡಿಎಫ್ ನಡುವೆ ರಹಸ್ಯ ಹೊಂದಾಣಿಕೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಗೆದ್ದಲ್ಲಿ ಅದರ ಪೂರ್ಣ ಜವಾಬ್ದಾರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ. ಎಲ್ಡಿಎಫ್ ಅಭ್ಯರ್ಥಿ ವಿ. ವಿ ರಮೇಶನ್ ಆರ್ಎಸ್ಎಸ್ನ ನಿಕಟ ಸಂಪರ್ಕ ಹೊಂದಿದ್ದಾರೆ. ಸಿಪಿಎಂ ಮತಗಳು ಬಿಜೆಪಿಗೆ ಬಿದ್ದಿವೆ. ರಹಸ್ಯ ಒಪ್ಪಂದದಂತೆ ನಡೆದಿವೆ'' ಎಂದು ಅವರು ದೂರಿದ್ದಾರೆ.
''ಮಂಜೇಶ್ವರ ಸೇರಿದಂತೆ ಬಿಜೆಪಿಯನ್ನು ಹತ್ತರಷ್ಟು ಕ್ಷೇತ್ರಗಳಲ್ಲಿ ಗೆಲ್ಲಿಸಲು ಸಿಪಿಎಂ ಒಪ್ಪಂದ ಮಾಡಿಕೊಂಡಿದೆ. ಬಿಜೆಪಿ ಎಲ್ಲಿಯೂ ಗೆಲ್ಲಬಾರದು ಎಂಬುದು ಕಾಂಗ್ರೆಸ್ ನಿಲುವಾಗಿದೆ. ಆದರೆ ಮಂಜೇಶ್ವರದ ಪಕ್ಷದ ಕಾರ್ಯಕರ್ತರಿಂದ ಲಭಿಸಿದ ಅಂಕಿ ಅಂಶ ತನಗೆ ನೋವುಂಟು ಮಾಡಿದೆ. ಗೆಲ್ಲುವ ಸಾಧ್ಯತೆ ಕಡಿಮೆ ಎನಿಸುತ್ತಿದೆ. ಮಂಜೇಶ್ವರದ ನೆಲದಲ್ಲಿ ಬಿಜೆಪಿ ಗೆಲ್ಲಬಾರದು. ಇದು ಕಾಂಗ್ರೆಸ್ನ ಸ್ಪಷ್ಟ ನಿಲುವು. ಬಿಜೆಪಿಯ ರಾಜ್ಯಾಧ್ಯಕ್ಷರನ್ನು ವಿಧಾನಸಭೆಗೆ ಕಳುಹಿಸಬೇಕು ಎಂಬುದು ಪಿಣರಾಯಿ ವಿಜಯನ್ ಹಾಗೂ ನರೇಂದ್ರ ಮೋದಿ, ಅಮಿತ್ ಶಾರ ನಡುವಿನ ಒಪ್ಪಂದವಾಗಿದೆ'' ಎಂದು ಅವರು ಆರೋಪಿಸಿದ್ದಾರೆ.