ಉಡುಪಿ, ಎ.06 (DaijiworldNews/PY): "ಅರ್ಧಕ್ಕೆ ನಿಂತ ಮಣಿಪಾಲ - ಪರ್ಕಳ ರಾಷ್ಟ್ರೀಯ ಹೆದ್ದಾರಿ 169(A) ಕಾಮಗಾರಿ ಆರಂಭಕ್ಕೆ 3ಜಿ ಸಿದ್ದಗೊಂಡಿದ್ದು, ಕೆಲಸವು ಎಪ್ರಿಲ್ 11ರಿಂದ ಪುನಾರಂಭಗೊಳ್ಳಲಿದೆ. ಈ ಅಪಾಯಕಾರಿ ರಸ್ತೆಯ ದುಸ್ಥಿತಿಯನ್ನು ಪ್ರಶ್ನಿಸಿ ತನ್ನ ಮೇಲೆ ಕೇಸು ದಾಖಲಿಸುವವರೆಗೆ ಈ ವಿಚಾರ ಬಂದಿತ್ತು. ಕೊನೆಗೂ 72 ಮಂದಿ ಭೂ ಮಾಲಿಕರು ತಮ್ಮ ಭೂಮಿಯನ್ನು ಬಿಟ್ಟು ಕೊಟ್ಟಿದ್ದಾರೆ. ಒಟ್ಟು 21.84 ಲಕ್ಷ. ರೂ. ಹಣ ಬಿಡುಗಡೆಯಾಗಿದ್ದು, ಭೂ ಸಂತ್ರಸ್ಥರಿಗೆ ದೊರೆಯುತ್ತದೆ" ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.





ಅವರು ಬುಧವಾರದಂದು ಭೂ ಸಂತ್ರಸ್ಥರ ಜೊತೆ ಆಯೊಜಿಸಿದ ಸಭೆಯಲ್ಲಿ ಮಾತನಾಡಿ, "ಈ ರಸ್ತೆಯಲ್ಲಿ ಆಗಾಗ ಅಪಘಾತಗಳು ಆಗುತ್ತಿದ್ದ ಹಿನ್ನೆಲೆಯಲ್ಲಿ ಜನರು ಜಿಲ್ಲಾಡಳಿತದ ಮೇಲೆ ಸಿಟ್ಟಿಗೆದ್ದಿದ್ದರು. ಒಮ್ಮೆ 3ಜಿ ಪ್ರಕಟಗೊಂಡ ಮೇಲೆ ಆ ಜಾಗ ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ. ಭೂ ಸ್ವಾಧೀನ ಸಂತ್ರಸ್ತರು ದಾಖಲೆಗಳನ್ನು ಒದಗಿಸಿದ ಕೂಡಲೇ ಪರಿಹಾರ ಧನ ಸಿಗುತ್ತದೆ. ಆ ಪರಿಹಾರ ಧನ ಸೂಕ್ತವಾದ ಅವಾರ್ಡ್ ಅಲ್ಲ ಎಂದು ಅನಿಸಿದರೆ ಅರ್ಬಿಟ್ರೇಟರ್ಗೆ ಮನವಿ ಮಾಡಬೇಕು. ಸದ್ಯ ಆ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿಯೇ ನಿರ್ವಹಿಸುತ್ತಾರೆ. ದಾಖಲೆ ಒದಗಿಸದಿದ್ದವರು ಒಂದು ತಿಂಗಳೊಳಗೆ ಕೊಡಬೇಕು. ದಾಖಲೆ ಕೊಡದವರ ಹಣವನ್ನು ಕೋರ್ಟ್ಗೆ ಡೆಪಾಸಿಟ್ ಮಾಡಲಾಗುತ್ತದೆ. ಈಗಾಗಲೇ ಕಾಂಟ್ರಾಕ್ಟರ್ ಜೊತೆ ಮಾತುಕತೆ ಆಗಿದೆ. ಮುಂದಿನ ರವಿವಾರದಿಂದಲೇ ಕೆಲಸ ಆರಂಭವಾಗುತ್ತದೆ" ಎಂದರು.
"ತಮ್ಮ ತಮ್ಮ ಜಾಗದಲ್ಲಿರುವ ಕಟ್ಟಡದ ವಸ್ತುಗಳು, ಮರಗಳನ್ನು ಆಯಾ ಜಾಗದ ಮಾಲಿಕರೇ ತೆಗೆದುಕೊಂಡು ಹೋಗಬೇಕು. ಸಾಧ್ಯವಾಗದಿದ್ದಲ್ಲಿ ಸಂಬಂಧ ಪಟ್ಟ ಇಲಾಖೆ ಸಹಾಯ ಕೋರಬಹುದು" ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ರಘುಪತಿ ಭಟ್, ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಪೌರಾಯು ಉದಯ್ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಸಹಾಯಕ ಅಭಿಯಂತರ ಮಂಜುನಾಥ್ ನಾಯಕ್, ಮತ್ತು ಭೂ ಮಾಲಕರು ಸ್ಥಳೀಯರು ಉಪಸ್ಥಿತರಿದ್ದರು.