ಮೂಡುಬಿದಿರೆ, ಸೆ 13(SM): ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ನಿನ್ನೆ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರು ಮೂಲದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ವಿನುತಾ ಎಂಬಾಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಹಬ್ಬುತ್ತಿದ್ದಂತೆ ಎಲ್ಲೆಡೆ ಖಂಡನೆಗಳು ವ್ಯಕ್ತವಾಗುತ್ತಿದೆ.
ಘಟನೆ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೆ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಸರಣಿ ಆತ್ಮಹತ್ಯೆ ಪ್ರಕರಣಗಳು ಸಂಶಯಕ್ಕೆ ಕಾರಣವಾಗುತ್ತಿದ್ದು ಇವೆಲ್ಲದರ ಕುರಿತಂತೆ ಸಮಗ್ರ ತನಿಖೆಯಾಗಬೇಕೆಂಬ ಒತ್ತಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ. ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ವಿದ್ಯಾಸಂಸ್ಥೆಯಲ್ಲಿ 2006 ರಿಂದ 2016 ರ ವರೆಗೆ ಒಟ್ಟು 8 ಆತ್ಮಹತ್ಯೆಗಳು ಹಾಗೂ ಎರಡು ಅಸಹಜ ಸಾವುಗಳು ಸಂಭವಿಸಿವೆ. ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹಾಗೂ ರಾಷ್ಟ್ರಮಟ್ಟದಲ್ಲಿ ಈ ವಿಚಾರ ಚರ್ಚೆಯಾಗಿತ್ತು. ಇದೀಗ ವಿನುತಾ ಆತ್ಮಹತ್ಯೆ ಪ್ರಕರಣ ನಡೆದಿರೋದು ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.