ಮಂಗಳೂರು, ಎ.08 (DaijiworldNews/MB) : ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ ಆರೋಪಿಯಾಗಿದ್ದ ಬಂಟ್ವಾಳದ ಕೆಳಗಿನ ಪೇಟೆಯ ನಿವಾಸಿ ನಾಸಿರ್ ಹುಸೇನ್ಗೆ (41) ಆರೋಪಿ ಎಂದು ನ್ಯಾಯಾಲಯದಲ್ಲಿ ಸಾಬೀತಾಗಿದ್ದು ಆರೋಪಿ ನಾಸಿರ್ಗೆ ಒಂದು ವರ್ಷ ಸಾದಾ ಸಜೆ ಹಾಗೂ 1000 ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ನಾಸಿರ್ ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂಪೆನಿಯವರು ಆತನ ಪಾಸ್ಪೋರ್ಟ್ನ್ನು ತೆಗೆದಿರಿಸಿದ್ದರು. ಈ ಹಿನ್ನೆಲೆ ಆತ ಔಟ್ಪಾಸ್ನಲ್ಲಿ ಹಿಂದಿರುಗಿ ತನ್ನ ಹುಟ್ಟೂರಿಗೆ ಬಂದಿದ್ದ.
ಆದರೆ 2019 ರ ಮಾರ್ಚ್ 18 ರಂದು ಮತ್ತೆ ವಿದೇಶಕ್ಕೆ ಹಿಂತಿರುಗುವ ವೇಳೆ ಆತನ ನಕಲಿ ಪಾಸ್ಪೋರ್ಟ್ ಬಳಸಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಈತನ ಮೇಲೆ ಅನುಮಾನಗೊಂಡ ಅಂದಿನ ಇಮಿಗ್ರೇಷನ್ ಅಧಿಕಾರಿಯಾಗಿದ್ದ ಮಂಜುನಾಥ ಶೆಟ್ಟಿ ಅವರು ಬಜಪೆ ಪೊಲೀಸರಿಗೆ ತಿಳಿಸಿದ್ದರು.
ಪೊಲೀಸರು ನಾಸಿರ್ನನ್ನು ಬಂಧನ ಮಾಡಿದ್ದರು. ಬಳಿಕ ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದಲ್ಲಿ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆದಿದ್ದು ಆರೋಪಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ವೇಳೆ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಾಲಯವು ಈ ಮೇಲ್ಮನವಿಯನ್ನು ಪುರಸ್ಕರಿಸಿದ್ದು ಈ ಬಗ್ಗೆ ಎಪ್ರಿಲ್ 5 ರಂದು ತೀರ್ಪು ಹೊರಬಿದ್ದಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಲೀಧರ ಪೈ ಅವರು ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ ನೀಡಿದ ತೀರ್ಪನ್ನು ಬದಲಾಯಿಸಿ ವಂಚನೆ, ಪೋರ್ಜರಿ, ಸುಳ್ಳು ದಾಖಲಾತಿ ಸೃಷ್ಟಿ ಹಾಗೂ ಪಾಸ್ಪೋರ್ಟ್ ಕಾಯ್ದೆಯಡಿಯಲ್ಲಿ ಆರೋಪಿ ಮೇಲೆ ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ ಆರೋಪಿಗೆ ಶಿಕ್ಷೆ ವಿಧಿಸಿದೆ.
ಪ್ರಾಸಿಕ್ಯೂಶನ್ ಪರ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ಅವರು ವಾದಿಸಿದ್ದರು.