ಉಡುಪಿ, ಎ.08 (DaijiworldNews/MB) : ''ಉಡುಪಿ ಮಕ್ಕಳ ಸ್ನೇಹಿ ಜಿಲ್ಲೆಯಾಗಿದೆ. ಇದು ರಾಷ್ಟ್ರೀಯ ಆಯೋಗವು ಮಕ್ಕಳ ಹಕ್ಕುಗಳಿಗಾಗಿ ನಿಗದಿಪಡಿಸಿದ ಅವಶ್ಯಕತೆಯನ್ನು ತಲುಪುವಲ್ಲಿ ಸಫಲವಾಗಿದೆ. ಇಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಲು ಜಿಲ್ಲಾಡಳಿತ ಕಾರ್ಯನಿರ್ವಹಿಸುತ್ತಿದೆ'' ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ಸದಸ್ಯ ಡಾ.ಆರ್.ಜಿ.ಆನಂದ್ ಹೇಳಿದರು.



ಉಡುಪಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
"ನಾನು ಇತ್ತೀಚಿನ ದಿನಗಳಲ್ಲಿ ಅನೇಕ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಉಡುಪಿಯಲ್ಲಿ 400 ಕ್ಕೂ ಹೆಚ್ಚು ಮಕ್ಕಳಿರುವ 28 ಚೈಲ್ಡ್ ಕೇರ್ ಸೆಂಟರ್ಗಳು ಇವೆ. ಜಿಲ್ಲಾಡಳಿತವು ಮಕ್ಕಳ ರಕ್ಷಣೆಯ ಕಡೆ ಹೆಚ್ಚಿನ ಗಮನ ಹರಿಸುತ್ತಿದೆ. ಜಿಲ್ಲಾಡಳಿತವು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಹ ಕೆಲಸ ಮಾಡುತ್ತಿದೆ. ಈ ಜಿಲ್ಲೆಯಲ್ಲಿ ಬಾಲ್ಯವಿವಾಹವನ್ನು ತಡೆಗಟ್ಟುವ ವಿಧಾನವೂ ಉತ್ತಮವಾಗಿದೆ. ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಮೂಲಕ ಮತ್ತು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಮೂಲಕ ಉಡುಪಿ ಮಕ್ಕಳ ಸ್ನೇಹಿ ಜಿಲ್ಲೆಯಾಗುವತ್ತ ಚಿತ್ತ ನೆಟ್ಟಿದೆ. ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಡುಪಿಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ಪರಿವರ್ತಿಸುವುದೇ ನಮ್ಮ ದ್ಯೇಯವಾಗಿದೆ. ಜಿಲ್ಲೆಯಲ್ಲಿ 34 ಪೊಲೀಸ್ ಠಾಣೆಗಳಿದ್ದು, ಎಲ್ಲವು ಮಕ್ಕಳ ಸ್ನೇಹಿ ಪೊಲೀಸರನ್ನು ಹೊಂದಿದೆ. ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು'' ಎಂದು ಹೇಳಿದ್ದಾರೆ.
"ನಾವು ಮಕ್ಕಳ ಆರೈಕೆ ಕೇಂದ್ರಗಳಿಗೆ ದಿಡೀರ್ ಭೇಟಿ ನೀಡುತ್ತೇವೆ. ಆಗ ಅಲ್ಲಿನ ವಾಸ್ತಾವತೆ ನಮ್ಮ ಗಮನಕ್ಕೆ ಬರುತ್ತದೆ. ಜಿಲ್ಲಾಡಳಿತ ಹೇಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ನಾವು ಪರಿಶೀಲನೆ ನಡೆಸುತ್ತೇವೆ. ಯಾವುದೇ ಲೋಪದೋಷಗಳು ಕಂಡುಬಂದರೆ, ರಾಷ್ಟ್ರೀಯ ಆಯೋಗವು ನಿರ್ದೇಶಕರಿಗೆ ಪತ್ರ ಬರೆಯಲಾಗುವುದು'' ಎಂದು ವಿವರಿಸಿದರು.
''ರಾಷ್ಟ್ರಮಟ್ಟದಲ್ಲಿ ಕೊರೊನಾ ಸೋಂಕಿತ ಮತ್ತು ಪೀಡಿತ ಮಕ್ಕಳಿಗೆ ಟೋಲ್ ಸಂಖ್ಯೆ ಇದೆ. ಸೋಂಕಿತ ಮಕ್ಕಳು ಸೋಮವಾರದಿಂದ ಶುಕ್ರವಾರದವರೆಗೆ 1800-121-2830ಕ್ಕೆ ಕರೆ ಮಾಡಬಹುದು. ಮಕ್ಕಳಿಗೆ ಸಮಾಲೋಚನೆ ನೀಡಲಾಗುವುದು. ಇದು ಮೂರು ಭಾಷೆಯಲ್ಲಿ ನಡೆಯುತ್ತದೆ. ಈಗ ನಾವು ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಟೆಲಿ-ಕೌನ್ಸೆಲಿಂಗ್ ನೀಡಲು ಚಿಂತನೆ ನಡೆಸುತ್ತಿದ್ದೇವೆ. ನಾವು ನಿಮ್ಹಾನ್ಸ್ನೊಂದಿಗೆ ಸಹಕರಿಸುತ್ತಿದ್ದೇವೆ. ಎನ್ಸಿಬಿಯ ಸಹಯೋಗದೊಂದಿಗೆ ಮಕ್ಕಳು ಡ್ರಗ್ ಸೇವನೆ ನಿರ್ಮೂಲನೆ ಮಾಡಲು ಎಸ್ಒಪಿಗಳಿವೆ'' ಎಂದು ತಿಳಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.