ಕಾರ್ಕಳ, ಎ.08 (DaijiworldNews/MB) : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚು ಮದ್ದು ನೀಡಿದ ಬಳಿಕ ನಾಲ್ಕೂವರೆ ತಿಂಗಳ ಮಗು ಮೃತಪಟ್ಟಿದ್ದು ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದಾಗಿಯೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಉದಯ ಶೆಟ್ಟಿ ಹಾಗೂ ವಾಣಿಶ್ರೀ ದಂಪತಿಯ ನಾಲ್ಕೂವರೆ ತಿಂಗಳ ಶ್ರೀಯಾನ್ ಮೃತ ಮಗು ಎಂದು ಗುರುತಿಸಲಾಗಿದೆ.
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಆರೋಗ್ಯ ಕೇಂದ್ರದ ಶುಶ್ರೂಕಿಯರು ಎ.7ರಂದು ಮಧ್ಯಾಹ್ನ 12.30 ಗಂಟೆಗೆ ಮಗುವಿಗೆ ತಿಂಗಳ ಚುಚ್ಚು ಮದ್ದು ನೀಡಿದ್ದಾರೆ. ನಂತರ ಶ್ರೀಯಾನ್ನನ್ನು ಮನೆಗೆ ಕರೆದುಕೊಂಡು ಬಂದಿದ್ದೇವೆ. ಮದ್ಯಾಹ್ನ 2:30 ಗಂಟೆಯಿಂದ 03:00 ಗಂಟೆಯ ಅವಧಿಯಲ್ಲಿ ಶ್ರೀಯಾನ್ ಬಾಯಿಯಲ್ಲಿ ನೊರೆ ಬಂದಿದ್ದಲ್ಲದೆ ತೀವ್ರ ಅಸ್ವಸ್ಥಗೊಂಡಿದ್ದ. ಅವನನ್ನು ಕಾರ್ಕಳ ರೋಟರಿ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದಾಗ ವೈದ್ಯರು ಸಂಜೆ 6:50 ಕ್ಕೆ ಮಗು ಮೃತ ಪಟ್ಟಿದ್ದಾಗಿ ತಿಳಿಸಿದ್ದಾರೆ. ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯವರು ಚುಚ್ಚುಮದ್ದು ನೀಡಿದ ಅಡ್ಡ ಪರಿಣಾಮದಿಂದಲೇ ಮೃತಪಟ್ಟಿದೆ ಎಂದು ಸಂಶಯವಿದೆ ಎಂದು ದೂರು ನೀಡಲಾಗಿದೆ.