ಕಾಸರಗೋಡು,ಏ. 08 (DaijiworldNews/HR): ಜಿಲ್ಲೆಯಲ್ಲಿ ಕೊರೊನಾನಾ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ವಲಯಗಳಲ್ಲೂ ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರಿ ಕಚೇರಿಗಳಲ್ಲೂ ಸಿಬ್ಬಂದಿ ಕಡ್ಡಾಯವಾಗಿ ಪಾಲಿಸಬೇಕಾದ ಸಂಹಿತೆಗಳನ್ನು ತಿಳಿಸುವ ಕರಪತ್ರವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇರವಾಗಿ ವಿವಿಧ ಕಚೇರಿಗಳಿಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ.



ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಗಾಗ ಸಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಬೇಕು, ಇದನ್ನು ಆಯಾ ಕಚೇರಿಗಳಲ್ಲಿ ಒಬ್ಬ ನೋಡೆಲ್ ಅಧಿಕಾರಿ ಮೂಲಕ ಖಚಿತಪಡಿಸಬೇಕು ಇತ್ಯಾದಿ ಮಾಹಿತಿಯನ್ನೊಳಗೊಂಡ ಕರಪತ್ರವನ್ನು ಅವರು ಹಂಚಿ, ಜೊತೆಗೆ ಆಯಾ ಸಿಬ್ಬಂದಿಯಲ್ಲಿ ಈ ಬಗ್ಗೆ ಮನವರಿಕೆ ಮಾಡಿದ್ದಾರೆ.
ಸುಮಾರು 10 ಕಚೇರಿಗಳಿಗೆ ನೇರವಾಗಿ ತೆರಳಿದ್ದ ಜಿಲ್ಲಾಧಿಕಾರಿ ಅವರ ಜೊತೆಗೆ ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಸಯನಾ, ಜಿಲ್ಲಾ ವಾರ್ತಾ ಕಚೇರಿಯ ಸಹಾಯಕ ಸಂಪಾದಕ ಪಿ.ಪಿ.ವಿನೀಷ್ ಮೊದಲಾದವರು ಇದ್ದರು.