ತೊಕ್ಕೊಟ್ಟು, ಏ. 07 (DaijiworldNews/SM): ಇಲ್ಲಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಲಾಟರಿ ಮೂಲಕ 1 ಕೋಟಿ ರೂ. ಒಲಿದಿದೆ. ಮೂರು ವರ್ಷಗಳಿಂದ ವಾಚ್ ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೇರಳ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ(65) ಒಂದು ಕೋಟಿ ರೂ.ಗಳ ಲಾಟರಿ ಗೆದ್ದಿದ್ದಾರೆ.

ವಿಶೇಷವೆಂದರೆ, ಮೊಯ್ದಿನ್ ಕುಟ್ಟಿಯವರಲ್ಲಿ ಲಾಟರಿ ಟಿಕೆಟ್ ಖರೀಧಿಸಲು ಹಣವಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಟೈಲರ್ ಅಂಗಡಿಯ ಮಾಲಕ ರವಿ ಅವರಿಂದ ಐನೂರು ರೂಪಾಯಿಗಳನ್ನು ಸಾಲವಾಗಿ ಪಡೆದುಕೊಂಡಿದ್ದರು. ಸಾಲ ಪಡೆದ ಹಣದಿಂದ ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿ ಟಿಕೆಟ್ ವೊಂದನ್ನು ಉಪ್ಪಳಕ್ಕೆ ತೆರಳಿ ಖರೀದಿಸಿದ್ದರು. ಇದೀಗ ಸಾಲ ಪಡೆದಿದ್ದ ಹಣವೇ ಮೊಯ್ದಿನ್ ಕುಟ್ಟಿಯವರ ಬಾಳು ಬಂಗಾರವಾಗಿಸಿದೆ.
ಲಾಟರಿ ತೆಗೆಯುವ ಹವ್ಯಾಸ ಹೊಂದಿದ್ದ ಮೊಯ್ದಿನ್ ಕುಟ್ಟಿ ಉಪ್ಪಳದಲ್ಲಿ ಖರೀದಿಸಿದ್ದ ಟಿಕೆಟ್ ಎ.4ರಂದು ಡ್ರಾ ಆಗಿತ್ತು. ಇದರಲ್ಲಿ ಇವರು ಖರೀದಿಸಿದ ಬಿ.ಜೆ. 134048 ಸಂಖ್ಯೆಗೆ ಒಂದು ಕೋಟಿ ರೂ. ಪ್ರಥಮ ಬಹುಮಾನ ಬಂದಿದೆ. ಆ ಮೂಲಕ ಲಾಟರಿಯ ಪ್ರಥಮ ಬಹುಮಾನದಲ್ಲಿ ಐದು ಮಂದಿ ಕೋಟಿ ವಿಜೇತರಲ್ಲಿ ಮೊಯ್ದಿನ್ ಕುಟ್ಟಿ ಒಬ್ಬರಾಗಿದ್ದಾರೆ. ಸತತವಾಗಿ ಟಿಕೆಟ್ ಖರೀದಿಸುತ್ತಿದ್ದ ಮೊಯ್ದಿನ್ ಕುಟ್ಟಿಯವರಿಗೆ ಇದೀಗ ಭಾಗ್ಯಲಕ್ಷ್ಮೀ ಕೈ ಹಿಡಿದಿದ್ದಾಳೆ.