ಕಾಸರಗೋಡು, ಸೆ 13(SM): ಕೇರಳ ನೆರೆ ಸಂತ್ರಸ್ತರ ಪುನರ್ವಸತಿ ಗುರಿಯೊಂದಿಗೆ ಸಚಿವರ ನೇತೃತ್ವದಲ್ಲಿ ಪ್ರತಿ ಜಿಲ್ಲೆಯಲ್ಲಿ ಧನಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಇಂದು ಧನ ಸಂಗ್ರಹ ಚಾಲನೆ ನೀಡಲಾಗಿದೆ. ಮೊದಲ ದಿನ ಎರಡು ತಾಲೂಕುಗಳಲ್ಲಿ 84 ಲಕ್ಷ ರೂಪಾಯಿ ದೇಣಿಗೆ ಹರಿದು ಬಂದಿದೆ.
ವೆಳ್ಳರಿಕುಂಡು ತಾಲೂಕಿನಲ್ಲಿ 33,42,723 ಲಕ್ಷ ರೂಪಾಯಿ ಮತ್ತು ಕಾಸರಗೋಡು ತಾಲೂಕಿನಲ್ಲಿ 51,31,404 ಲಕ್ಷ ರೂಪಾಯಿ ದೇಣಿಗೆಯಾಗಿ ಲಭಿಸಿದೆ. ಇಂದು ವೆಳ್ಳರಿಕುಂಡು ಮತ್ತು ಕಾಸರಗೋಡು ತಾಲೂಕಿನಲ್ಲಿ ಧನಸಂಗ್ರಹ ನಡೆಸಲಾಗಿದೆ. 15ರಂದು ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನಲ್ಲಿ ಧನ ಸಂಗ್ರಹ ಅಭಿಯಾನ ನಡೆಯಲಿದೆ. ವೆಳ್ಳರಿಕುಂಡು ಮತ್ತು ಹೊಸದುರ್ಗ ತಾಲೂಕಿನಲ್ಲಿ ನಡೆದ ಅಭಿಯಾನಕ್ಕೆ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಚಾಲನೆ ನೀಡಿದರು. ಬೆಳಿಗ್ಗೆಯಿಂದಲೇ ಹಲವು ಸಂಘಟನೆಗಳು, ಸರಕಾರಿ ಸಿಬ್ಬಂದಿಗಳು, ಜನಸಾಮಾನ್ಯರು, ರಾಜಕೀಯ ಪಕ್ಷ, ದೇವಸ್ಥಾನ, ಮಸೀದಿ, ಚರ್ಚ್ ಸಮಿತಿ ಹಾಗೂ ಇನ್ನಿತರ ವಲಯಗಳಿಂದ ದೇಣಿಗೆ ಹರಿದು ಬಂತು. ಬೆಳಿಗ್ಗೆ ವೆಳ್ಳರಿಕುಂಡು ಮತ್ತು ಮಧ್ಯಾಹ್ನ ಬಳಿಕ ಕಾಸರಗೋಡು ತಾಲೂಕಿನಲ್ಲಿ ದೇಣಿಗೆ ಸಂಗ್ರಹ ನಡೆಯಿತು. ಇನ್ನು ಸೆಪ್ಟೆಂಬರ್ 15 ರಂದು ಬೆಳಿಗ್ಗೆ ಹೊಸದುರ್ಗ ಮತ್ತು ಮಧ್ಯಾಹ್ನ ಬಳಿಕ ಮಂಜೇಶ್ವರ ತಾಲೂಕಿನಲ್ಲಿ ಧನಸಂಗ್ರಹ ಅಭಿಯಾನ ನಡೆಯಲಿದೆ.